ಹೈದರಾಬಾದ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಂದು ಮಹತ್ವದ ದಿನ. ಬಹುನಿರೀಕ್ಷಿತ ಬಾಹುಬಲಿ ಸಿನಿಮಾ ಇಂದು ತೆರೆಗೆ ಅಪ್ಪಳಿಸಿದೆ. ಅಷ್ಟಕ್ಕೂ ಈ ಸಿನಿಮಾ ನೀವು ನೋಡಲೇಬೇಕಾದ ಕಾರಣವೇನು?
ಎಲ್ಲರಿಗಿಂತ ಮೊದಲು ಸಿನಿಮಾ ನೋಡಿದ ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರು ಸಿನಿಮಾದ ಸ್ಪೆಷಾಲಿಟಿಯನ್ನು ತೆರೆದಿಟ್ಟಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದ ನಿರ್ದೇಶಕ ರಾಜಮೌಳಿ ಎರಡನೇ ಭಾಗದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆಂದು ರಹಸ್ಯ ಬಿಚ್ಚಿದ್ದಾರೆ.
ಅದರ ಬಗ್ಗೆ ವಿವರಣೆ ನಾನು ನೀಡಲಾರೆ. ಆದರೆ ರಹಸ್ಯ ಗೊತ್ತಾದ ಮೇಲೆ ನೀವು ನಿಜಕ್ಕೂ ದಂಗಾಗುತ್ತೀರಿ ಎಂದು ಅವರು ಹೇಳಿದ್ದಾರೆ. ಮೊದಲನೇ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗ ಸ್ವಲ್ಪ ಸುದೀರ್ಘವೆನಸುತ್ತದೆ. ಆದರೆ ಎಲ್ಲೂ ಬೋರ್ ಹೊಡೆಸಲ್ಲ.
ನಾವು ಚಿತ್ರದ ಯಾವುದೇ ಭಾಗ, ಸಂಭಾಷಣೆಗೆ ಕತ್ತರಿ ಹಾಕಿಲ್ಲ. ಚಿತ್ರ ತಂಡ ನಮಗೆ ಹೇಗೆ ಕೊಟ್ಟಿತೋ, ಹಾಗೆಯೇ ಓಕೆ ಮಾಡಿ ಕಳುಹಿಸಿದ್ದೇವೆ. ಫೈಟಿಂಗ್ ದೃಶ್ಯಗಳು ಹಾಲಿವುಡ್ ಸಿನಿಮಾವನ್ನು ನೆನಪಿಸುತ್ತವೆ. ಪ್ರಭಾಸ್ ಮತ್ತು ರಾಣಾ ಅದ್ಭುತವಾಗಿ ನಟಿಸಿದ್ದಾರೆ. ಗಾಯಗೊಂಡ ಹುಲಿಗಳನ್ನು ಬೋನಿನಲ್ಲಿ ಕೂಡಿಟ್ಟರೆ ಘರ್ಜಿಸುವಂತೆ ಇಬ್ಬರೂ ಅಬ್ಬರಿಸಿದ್ದಾರೆ.
ಏನೇ ಆದರೂ, ಪ್ರೇಕ್ಷಕನಿಗೆ ಎಲ್ಲೂ ನಿರಾಸೆಯಾಗಲ್ಲ. ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕ ಎಂದು ಖುಷಿಯಿಂದ ಹೊರಬರುತ್ತಾನೆ. ಅಲ್ಲದೆ, ಬಾಹುಬಲಿ 2 ನೇ ಭಾಗಕ್ಕೆ ಮುಕ್ತಾಯವಾಯಿತಲ್ಲಾ ಎಂದು ಬೇಸರ ಪಟ್ಟುಕೊಂಡರೂ ಅಚ್ಚರಿಯಿಲ್ಲ ಎಂದು ಸೆನ್ಸಾರ್ ಮಂಡಳಿ ಸದಸ್ಯರು ಹಾಡಿ ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ