ಬೆಂಗಳೂರು: ಸ್ಟಾರ್ ನಟರ ಸಿನಿಮಾಗಳಿಲ್ಲದೇ, ಹಿಟ್ ಸಿನಿಮಾಗಳು ಬಾರದೇ ಕನ್ನಡ ಚಿತ್ರಮಂದಿರಗಳು ಸೊರಗಿ ಹೋಗಿದ್ದವು. ಆದರೆ ಈಗ ಸಿಕ್ಕ ಮೂರು ಸಿನಿಮಾಗಳ ಗೆಲುವು ಬೂಸ್ಟ್ ನೀಡಿದಂತಾಗಿದೆ.
ಎರಡು ವಾರದ ಮೊದಲು ಬಿಡುಗಡೆಯಾಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಬಹಳ ದಿನಗಳ ನಂತರ ಕನ್ನಡ ಚಿತ್ರರಂಗಕ್ಕೆ ಬೇಕಾಗಿದ್ದ ಬ್ರೇಕ್ ಕೊಟ್ಟಿತ್ತು. ಹೊಸಬರ ಸಿನಿಮಾವಾದರೂ ಪರಭಾಷಿಕರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೌಸ್ ಫುಲ್ ಪ್ರದರ್ಶನ ಕಂಡಿತ್ತು.
ಇದಾದ ಬಳಿಕ ಜುಲೈ 28 ಕ್ಕೆ ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಕೌಸಲ್ಯ ಸುಪ್ರಜಾ ರಾಮ ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಆಚಾರ್ ಆಂಡ್ ಕೋ. ಎನ್ನುವ ಎರಡು ಸಿನಿಮಾಗಳು ಬಿಡುಗಡೆಯಾಗಿದ್ದವು. ಎರಡೂ ಸಿನಿಮಾಗಳು ಒಟ್ಟಿಗೇ ಬಿಡುಗಡೆಯಾದಾಗ ಒಂದು ಕಳೆಗುಂದುತ್ತದೆ ಎನ್ನಲಾಗುತ್ತದೆ. ಆದರೆ ಅದನ್ನು ಈ ಎರಡೂ ಸಿನಿಮಾಗಳು ಹುಸಿಗೊಳಿಸಿವೆ. ಏಕಕಾಲಕ್ಕೆ ಬಿಡುಗಡೆಯಾದರೂ ಎರಡೂ ಸಿನಿಮಾಗಳೂ ಫ್ಯಾಮಿಲಿ ಪ್ರೇಕ್ಷಕರನ್ನು ಥಿಯೇಟರ್ ಗೆ ಕರೆದು ತರಲು ಯಶಸ್ವಿಯಾಗಿದೆ. ಆ ಮೂಲಕ ತಾನೂ ಗೆದ್ದು ಸ್ಯಾಂಡಲ್ ವುಡ್ ನ್ನು ಈ ಮೂರೂ ಸಿನಿಮಾಗಳೂ ಗೆಲ್ಲಿಸಿವೆ.