ನವದೆಹಲಿ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅವರ ಸ್ನೇಹಿತರು ಹಿಮಾಲಯದಲ್ಲಿ ಧ್ಯಾನ ಕೇಂದ್ರ ಸ್ಥಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಯ ಯೋಗದ ಸತ್ಸಂಗ ಸೊಸೈಟಿಯ ಶತಮಾನೋತ್ಸವ ಅಂಗವಾಗಿ ರಜನಿ ಹಾಗೂ ಅವರ ಗೆಳೆಯರು ಹಿಮಾಲಯದಲ್ಲಿ ಧ್ಯಾನ ಕೇಂದ್ರ ನಿರ್ಮಿಸಿದ್ದಾರೆ. ಉತ್ತರಾಖಂಡ್‌ನ ದ್ರೋಣಗಿರಿ ಪರ್ವತದಲ್ಲಿ ಧ್ಯಾನ ಕೇಂದ್ರ ಸ್ಥಾಪಿಸಲಾಗಿದೆ. ನವೆಂಬರ್ 10ರಂದು ಧ್ಯಾನ ಕೇಂದ್ರ ಲೋಕಾರ್ಪಣೆಯಾಗಲಿದೆ.
ಆಧ್ಯಾತ್ಮದಲ್ಲಿ ನಂಬಿಕೆ ಹೊಂದಿರುವ ಸೂಪರ್ ಸ್ಟಾರ್ ರಜನಿ ಹಾಗೂ ಅವರ ಸ್ನೇಹಿತರ ಬಳಗ, ಹಿಮಾಲಯದಲ್ಲಿ ಶ್ರೀಗುರು ಮಹಾವತಾರ ಬಾಬಾ ನೆಲೆಸಿದ್ದಾರೆ ಎಂದು ಹಿಮಾಲಯದ ಗುಹೆಗೆ ದಶಕದಿಂದಲೂ ಭೇಟಿ ನೀಡುತ್ತಿದ್ದಾರೆ. ರಜನಿಕಾಂತ್ ಹಾಗೂ ಗೆಳೆಯರಾದ ಬೆಂಗಳೂರಿನ ಉದ್ಯಮಿ ಹರಿ, ದೆಹಲಿಯ ವಿ.ಡಿ.ಮೂರ್ತಿ, ಶ್ರೀಧರ್ ಹಾಗೂ ಚೆನ್ನೈನ ವಿಶ್ವನಾಥನ್ ಸೇರಿಕೊಂಡು ಈ ಧ್ಯಾನ ಕೇಂದ್ರ ಸ್ಥಾಪಿಸಿದ್ದಾರೆ.
ಭಾರತೀಯ ಯೋಗದ ಸತ್ಸಂಗ ಸೊಸೈಟಿಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಧ್ಯಾನ ಕೇಂದ್ರ ನಿರ್ಮಿಸಿದ್ದೇವೆ. ಹಿಮಾಲಯಕ್ಕೆ ಭೇಟಿ ಕೊಡುವ ಬಾಬಾಜಿ ಅವರ ಭಕ್ತರಿಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸೋದು ಧ್ಯಾನ ಕೇಂದ್ರದ ಪ್ರಮುಖ ಉದ್ದೇಶ ಎಂದು ವಿಶ್ವನಾಥನ್ ತಿಳಿಸಿದ್ದಾರೆ.
ಸದ್ಯ '2.O' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಜನಿಕಾಂತ್, ನ. 10ರಂದು ನಡೆಯುವ ಧ್ಯಾನ ಕೇಂದ್ರದ ಗೃಹಪ್ರವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜೊತೆಗೆ 2018ರ ಮಾರ್ಚ್‌ನಲ್ಲೂ ಸಹ ರಜನಿ ಹಿಮಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಎಂದು ವಿ. ವಿಶ್ವನಾಥನ್ ಹೇಳಿದ್ದಾರೆ.