ಬೆಂಗಳೂರು: ಈ ಬಾರಿ ಮಂಡ್ಯ ಲೋಕಸಭೆ ಚುನಾವಣಾ ಕಣದಲ್ಲಿ ಸ್ಪರ್ಧೆಗಿಳಿಯಲು ತೀರ್ಮಾನಿಸಿರುವ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಮ್ಮ ಪುತ್ರ ಅಭಿಷೇಕ್ ಅಲ್ಲದೆ, ಮನೆ ಮಕ್ಕಳೆಂದೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡಾ ಸುಮಲತಾಗೆ ಸಾಥ್ ಕೊಟ್ಟು ನಿಮ್ಮ ಜತೆಗೆ ನಾವಿದ್ದೇವೆ ಎಂದು ಸಾರಿದ್ದಾರೆ.
ಸುಮಲತಾ ಅಕ್ಕ ಪಕ್ಕ ಯಶ್ ಮತ್ತು ದರ್ಶನ್ ಕುಳಿತಿದ್ದು ವಿಶೇಷವಾಗಿತ್ತು. ಇನ್ನು, ಚುನಾವಣೆ ವಿಚಾರವಾಗಿ ಸುದೀರ್ಘ ಮಾಹಿತಿ ಕೊಟ್ಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸುಮಲತಾಗಾಗಿ ನಾವು ಪಕ್ಷ ಬೇಧ ಮರೆತು ಇಡೀ ಸ್ಯಾಂಡಲ್ ವುಡ್ ಒಂದಾಗಿದ್ದೇವೆ. ಪುನೀತ್ ರಾಜ್ ಕುಮಾರ್ ಕೂಡಾ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ.
ಅಲ್ಲದೆ, ನಾವು ಯಾವುದೇ ಪಕ್ಷಕ್ಕಾಗಿ, ಯಾವ ನಾಯಕರ ಬಗ್ಗೆ ನಾವು ತಪ್ಪಾಗಿ ಮಾತನಾಡಲ್ಲ. ಯಾರ ವಿರುದ್ಧವೂ ನಮ್ಮ ಸ್ಪರ್ಧೆ ಅಲ್ಲ. ಅಂಬರೀಶ್ ಮೇಲಿನ ಜನರ ಪ್ರೀತಿಗೆ, ಜನರ ಸೇವೆಗೆ ಚುನಾವಣೆಗೆ ಸುಮಲತಾ ಅಮ್ಮ ಸ್ಪರ್ಧಿಸುತ್ತಿದ್ದಾರೆ ಎಂದಿದ್ದಾರೆ. ಇದೇ ಮಾರ್ಚ್ 20 ರಂದು ಸುಮಲತಾ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಅಂಬರೀಶ್ ಪುತ್ರ ಅಭಿಶೇಕ್ ಅಂಬರೀಶ್ ಕೂಡಾ ಮಾತನಾಡಿ ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ತಂದೆ, ನಮ್ಮ ಕುಟುಂಬದ ಮೇಲಿನ ಮಂಡ್ಯ ಜನರ ಪ್ರೀತಿಗೆ ಚುನಾವಣೆಗೆ ಸಿದ್ಧರಾಗಿರುವುದಾಗಿ ಹೇಳಿದರು.
ಇನ್ನು, ರಾಕಿ ಬಾಯ್ ಯಶ್ ಕೂಡಾ ಸುಮಲತಾಗೆ ಬೆಂಬಲ ಸೂಚಿಸಿದ್ದು, ಅಂಬರೀಶ್, ಸುಮಲತಾ ಅಕ್ಕ ನಮಗೆ ಕುಟುಂಬದವರಿದ್ದಂತೆ. ನಾವು ಆ ಮನೆಯ ಮಗ ಇದ್ದ ಹಾಗೆ. ಅವರು ಒಂದು ನಿರ್ಧಾರ ತೆಗೆದುಕೊಂಡ ಮೇಲೆ ಅವರು ಏನು ಹೇಳ್ತಾರೋ ಅದಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದರು.
ಮನೆ ಮಕ್ಕಳಾಗಿ ಅಮ್ಮನ ಜತೆಗೆ ನಾವಿದ್ದೇವೆ. ನಾವು ಸ್ಟಾರ್ ಗಳಾಗಿ ಅವರ ಜತೆಗೆ ಬಂದಿಲ್ಲ. ನಮ್ಮ ಅಭಿಮಾನಿಗಳಿಗೂ ವೋಟ್ ಹಾಕಿ ಅಂತ ಒತ್ತಾಯ ಮಾಡುವ ಯೋಗ್ಯತೆ ನಮಗಿಲ್ಲ. ವೋಟ್ ಮಾಡುವುದು ಅವರ ಇಷ್ಟ. ಆದರೆ ಅಮ್ಮನ ಜತೆಗೆ ನಾವು ಇರ್ತೇವೆ. ಜನರಿಗೆ ನಿಮಗೆ ಮನಸ್ಸಿದ್ದರೆ ವೋಟ್ ಹಾಕಿ ಎನ್ನಬಹುದಷ್ಟೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ