ಬೆಂಗಳೂರು: ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ನ್ನು ಪರಭಾಷೆ ಸಿನಿಮಾಗಳಿಗಾಗಿ ಚಿತ್ರಮಂದಿರಗಳಿಂದ ತೆಗೆಯಲಾಗುತ್ತಿದೆ ಎಂಬ ವಿವಾದದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಇಂದು ಶಿವರಾಜ್ ಕುಮಾರ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಿತು.
ಬೆಳಿಗ್ಗೆ ಸಿಎಂ ಬೊಮ್ಮಾಯಿವರನ್ನು ಭೇಟಿಯಾಗಿದ್ದ ಶಿವರಾಜ್ ಕುಮಾರ್, ನಿರ್ಮಾಪಕ ಕಿಶೋರ್, ಬಳಿಕ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ಜೈರಾಜ್ ಮತ್ತು ಇತರರೊಂದಿಗೆ ಸಭೆ ನಡೆಸಿ ವಿವಾದ ಬಗೆಹರಿಸಿತು.
ಬಳಿಕ ಮಾತನಾಡಿದ ಶಿವಣ‍್ಣ 'ಸಿಎಂ ಬೊಮ್ಮಾಯಿವರು ಈ ಸಮಸ್ಯೆಗೆ ಸ್ಪಂದಿಸಿದ್ದಾರೆ. ಸುಮ್ಮನೇ ತಪ್ಪು ಹುಡುಕಬಾರದು. ಇದು ನಿರ್ಮಾಪಕರು ಮತ್ತು ವಿತರಕರ ನಡುವೆ ನಡೆಯುತ್ತಿದೆ. ಅಪ್ಪು ಕೊನೆ ಸಿನಿಮಾ ಎಂಬ ಕಾರಣಕ್ಕೆ ಜನರಲ್ಲಿ ಎಮೋಷನ್ ಇದೆ. ಸಿಎಂ ಕೂಡಾ ಸಮಸ್ಯೆ ಏನೆಂದು ಖುದ್ದಾಗಿ ನನಗೆ ನಿನ್ನೆ ಮೂರು ಮೂರು ಬಾರಿ ಕರೆ ಮಾಡಿ ವಿಚಾರಿಸಿದ್ದಾರೆ. ಈವತ್ತೂ ಅವರನ್ನು ಭೇಟಿಯಾದಾಗ ಏನೇ ಸಮಸ್ಯೆಯಿದ್ದರೂ ನಮ್ಮ ಸಹಕಾರವಿರುತ್ತದೆ ಎಂದಿದ್ದರು. ಅವರು ಮೊದಲಿನಿಂದಲೂ ನಮ್ಮ ಕುಟುಂಬ ಮಾತ್ರವಲ್ಲ, ಇಡೀ ಚಿತ್ರರಂಗದ ಪರವಾಗಿಯೇ ಇದ್ದಾರೆ. ಚಿತ್ರರಂಗ ಫ್ಯಾಮಿಲಿಯಿದ್ದಂತೆ. ಯಾರಿಗೇ ಸಮಸ್ಯೆಯಾದರೂ ನಾನು ಇಲ್ಲಿ ಬಂದು ಮಾತಾಡಲೇಬೇಕಾಗುತ್ತದೆ ಎಂದು ಶಿವರಾಜ್ ಕುಮಾರ್ ಹೇಳಿದರು.
ಇದಕ್ಕೂ ಮೊದಲು ನಿರ್ಮಾಪಕ ಕಿಶೋರ್ ಮಾತನಾಡಿ ಯಾರೂ ಸಿನಿಮಾ ತೆಗೆಯಲು ಒತ್ತಡ ಹೇರಿಲ್ಲ. ಆದರೆ ಒಂದು ನೈಟ್ ಶೋ ಕೊಡ್ತೀರಾ ಅಂತ ಕೇಳಿದ್ರು. ನೀವೇ ಆನ್ ಲೈನ್ ನಲ್ಲಿ ನೋಡಿದ್ರೆ ಗೊತ್ತಾಗುತ್ತದೆ. ಎಲ್ಲೂ ಸಿನಿಮಾ ತೆಗೆದಿಲ್ಲ. 386 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಎರಡನೇ ವಾರ 275 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ ಎಂದಿದ್ದಾರೆ.