ಜೈಲರ್', 'ಸ್ತ್ರೀ 2' ಮತ್ತು 'ಡಬಲ್ ಐಸ್‌ಮಾರ್ಟ್' ಸಿನಿಮಾದ ಹಾಡುಗಳಿಗೆ ಕೋರಿಯೋಗ್ರಾಫಿ ಮಾಡಿದ ಟಾಲಿವುಡ್ ಡ್ಯಾನ್ಸ್ ಮಾಸ್ಟರ್ ಶೇಕ್ ಜಾನಿ ಬಾಷಾ ಅಲಿಯಾಸ್ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.
ಸೈಬರಾಬಾದ್‌ನ ರಾಯದುರ್ಗಂ ಪೊಲೀಸರು 21 ವರ್ಷದ ಯುವತಿ ನೀಡಿದ ದೂರಿನಂತೆ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾನಿ ಮಾಸ್ಟರ್ ಅವರು ಚೆನ್ನೈ, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ ಮತ್ತು ನರಸಿಂಗಿಯಲ್ಲಿರುವ ಅವರ ನಿವಾಸದಲ್ಲಿ ಸಂತ್ರಸ್ತೆಯ ಮೇಲೆ ಅನೇಕ ಬಾರಿ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಆರಂಭದಲ್ಲಿ ರಾಯದುರ್ಗದಲ್ಲಿ ಶೂನ್ಯ ಎಫ್‌ಐಆರ್‌ನಂತೆ ದಾಖಲಾಗಿದ್ದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ನರಸಿಂಗಿ ಪೊಲೀಸರಿಗೆ ವರ್ಗಾಯಿಸಲಾಗಿದೆ.
ಜಾನಿ ಮಾಸ್ಟರ್ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), ಮತ್ತು ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಇತ್ತೀಚೆಗೆ, ಜಾನಿ ಮಾಸ್ಟರ್ ಅವರು ಧನುಷ್, ನಿತ್ಯಾ ಮೆನನ್ ಮತ್ತು ರಾಶಿ ಖನ್ನಾ ಅಭಿನಯದ ತಮಿಳು ಡಬ್ಬಿಂಗ್ ಚಲನಚಿತ್ರ 'ತಿರು' ಚಿತ್ರದ ಮೇಘಮ ಕರಿಗೇನು ಹಾಡಿಗೆ ಅತ್ಯುತ್ತಮ ನೃತ್ಯ ಸಂಯೋಜಕರಾಗಿ ರಾಷ್ಟ್ರಪ್ರಶಸ್ತಿ ಗಳಿಸಿ ಸುದ್ದಿಯಲ್ಲಿದ್ದರು.