ಕೇರಳ: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ಸಿದ್ದಿಕ್ ವಿರುದ್ಧ ಕೇರಳ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ನಟ ನಾಪತ್ತೆಯಾದ ಬೆನ್ನಲ್ಲೇ ನೋಟಿಸ್ ಜಾರಿ ಮಾಡಲಾಗಿದೆ.
ಹೇಮಾ ಕಮಿಟಿ ಹೊರಬೀಳುತ್ತಿದ್ದ ಹಾಗೇ ಮಲಯಾಳಂ ಚಿತ್ರರಂಗದಲ್ಲಿ ಕೆಲ ಖ್ಯಾತ ನಿರ್ದೇಶಕ ಹಾಗೂ ನಟರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬರುತ್ತಿದೆ. ಇನ್ನೂ ನಟ ಸಿದ್ದಿಕ್ ವಿರುದ್ಧವು ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಕೇರಳ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ನಟ ನಾಪತ್ತೆಯಾಗಿದ್ದರು. ಈ ನಡುವೆ ಕೇರಳ ಪೊಲೀಸರು ನಟನ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ನಟ ಸಿದ್ದಿಕ್ ವಿರುದ್ಧ ಕೇರಳದ ಎಲ್ಲಾ ಜಿಲ್ಲೆಗಳ ಎಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ನಟ ರಾಜ್ಯ ಬಿಟ್ಟು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಆತನ ಮಾಹಿತಿಯನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳೊಂದಿಗೆ ಹಂಚಿಕೊಂಡಿದ್ದಾರೆ. ಲುಕ್‌ಔಟ್ ನೋಟಿಸ್‌ಗೆ ಪೊಲೀಸ್ ವರಿಷ್ಠಾಧಿಕಾರಿ ಸಹಿ ಹಾಕಿದ್ದಾರೆ.
ಸೆಪ್ಟೆಂಬರ್ 24 ರಂದು ಕೇರಳ ಹೈಕೋರ್ಟ್ 61 ವರ್ಷದ ನಟ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ತೀರ್ಪನ್ನು ಪ್ರಶ್ನಿಸಿ ನಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಪರಾಧ ವಿಭಾಗವು ನಟನನ್ನು ಬಂಧಿಸುವಂತೆ ಕೊಚ್ಚಿ ಪೊಲೀಸರಿಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ದಿಕ್ ನಾಪತ್ತೆಯಾಗಿದ್ದು, ಪತ್ತೆಯಾಗಿಲ್ಲ.