ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಒಂದಂತೂ ಸ್ಪಷ್ಟವಾಗುತ್ತದೆ. ಕನ್ನಡ ಚಿತ್ರರಂಗದ ಕಲಾವಿದರು ಈಗ ಹಾದಿ ತಪ್ಪಿದಾಗ ಕಿವಿ ಹಿಂಡೋರೇ ಇಲ್ಲವಾಗಿದೆ.
ರೆಬಲ್ ಸ್ಟಾರ್ ಅಂಬರೀಶ್ ಇರುವವರೆಗೂ ಚಿತ್ರರಂಗದಲ್ಲಿ ಏನೇ ಸಮಸ್ಯೆ ಬಂದರೂ ಒಟ್ಟಾಗಿ ಕೂತು ಸಂಧಾನ ಮಾತುಕತೆಗಳು ನಡೆಯುತ್ತಿತ್ತು. ಅವರ ಹಿರಿತನಕ್ಕೆ ಎಲ್ಲರೂ ಬೆಲೆ ಕೊಡುತ್ತಿದ್ದರು. ಆದರೆ ಈಗ ಅವರ ನಂತರ ಚಿತ್ರರಂಗದಲ್ಲಿ ಕೂತು ಬುದ್ಧಿ ಮಾತು ಹೇಳುವವರು ಯಾರೂ ಇಲ್ಲವಾಗಿದ್ದಾರೆ.
ಇದರ ಪರಿಣಾಮವೇ ಇತ್ತೀಚೆಗೆ ನಡೆದ ದರ್ಶನ್, ಇಂದ್ರಜಿತ್ ಕಾಳಗ, ದರ್ಶನ್ ಅಭಿಮಾನಿಗಳು-ಜಗ್ಗೇಶ್ ನಡುವೆ ನಡೆದ ಗಲಾಟೆ, ಅದಕ್ಕೂ ಮೊದಲು ಡ್ರಗ್ ಜಾಲದ ಹಗರಣ. ಎಲ್ಲಾ ಸಂದರ್ಭಗಳಲ್ಲಿಯೂ ಚಿತ್ರರಂಗದ ಸಮಸ್ಯೆಗಳೂ ಮಾಧ್ಯಮಗಳ ಮೂಲಕ ಹಾದಿ ಬೀದಿಯ ಚರ್ಚೆಯಾದವು. ಆದರೆ ಯಾರೂ ಸಂಬಂಧಪಟ್ಟವರನ್ನು ವಾಣಿಜ್ಯ ಮಂಡಳಿಗೆ ಕರೆಸಿ ಮಾತುಕತೆ ಮೂಲಕ ಬಗೆಹರಿಸುವ ಪ್ರಯತ್ನ ನಡೆಯಲಿಲ್ಲ. ಹೀಗಾಗಿ ಈಗ ಚಿತ್ರರಂಗಕ್ಕೆ ನಾಯಕನ ಕೊರತೆ ಎದ್ದು ಕಾಣುತ್ತಿದೆ ಎಂದರೆ ತಪ್ಪಾಗಲಾರದು.