ಬೆಂಗಳೂರು: ಹಾಸನದಲ್ಲಿ ತಾವು ಖರೀದಿಸಿದ್ದ ಜಮೀನಿನಲ್ಲಿ ರಸ್ತೆ ವಿಚಾರಕ್ಕಾಗಿ ಗ್ರಾಮಸ್ಥರೊಂದಿಗೆ ನಡೆದ ಕಲಹಕ್ಕೆ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್ ಯಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಾಸನದಲ್ಲಿ ಯಶ್ 50 ಎಕರೆ ಭೂಮಿ ಖರೀದಿಸಿದ್ದರು. ಇಲ್ಲಿ ರಸ್ತೆ ನಿರ್ಮಿಸುವ ಸಂಬಂಧವಾಗಿ ಗ್ರಾಮಸ್ಥರು ಮತ್ತು ಯಶ್ ಕುಟುಂಬದ ನಡುವೆ ವಾಗ್ವಾದವಾಗಿದೆ. ಈ ವೇಳೆ ಯಶ್ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪಾ ಕೂಡಾ ಅಲ್ಲಿದ್ದರು. ಅವರ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಯಶ್ ಗೆ ಸಿಟ್ಟಿಗೆ ಕಾರಣವಾಯಿತು.
ಇದೇ ಕಾರಣಕ್ಕೆ ಅವರು ದದ್ದು ಪೊಲೀಸ್ ಠಾಣೆಗೆ ಬಂದು ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಯಶ್ ನನ್ನ ತಂದೆ-ತಾಯಿಯ ಮೇಲೆ ಹಲ್ಲೆ ನಡೆಸಲು ಮುಂದಾದರೆ ಸುಮ್ಮನಿರಬೇಕಾ? ಅಪ್ಪ-ಅಮ್ಮನಿಗೆ ಹುಟ್ಟಿದ ಮಗ ನಾನು. ನನ್ನನ್ನು ಎಲ್ಲಿಂದಲೋ ಹೊರಗಿನಿಂದ ಬಂದವನು ಅಂತಾರೆ. ನಾನು ಹಾಸನದವನು. ಇಲ್ಲಿಯೇ ಹುಟ್ಟಿದವನು. ನಾನು ಇಲ್ಲಿ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲಾದರೂ ಜಮೀನು ಖರೀದಿ ಮಾಡ್ತೀನಿ, ಮಂಗಳೂರಲ್ಲಾದರೂ ಮಾಡ್ತೀನಿ, ಕರ್ನಾಟಕದ ಯಾವುದೇ ಮೂಲೆಯಲ್ಲಿ ಮಾಡ್ತೀನಿ. ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಹುಡುಗರ ಮೇಲೆ ಕೈ ಮಾಡಿದ್ದಾರೆ. ಒಳ್ಳೆ ಕೆಲಸಕ್ಕೆ ಬೇಕು ಅಂತಾದರೆ ನಾನೇ 10 ಎಕರೆ ಬೇಕಾದ್ರೂ ಕೊಡ್ತೀನಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಯಶ್ ಪೊಲೀಸ್ ಠಾಣೆಯಿಂದ ಹೊರಹೋಗುವಾಗ ಗ್ರಾಮಸ್ಥರು ಧಿಕ್ಕಾರ ಹಾಕಿದ್ದಾರೆ. ರೈತ ವಿರೋಧಿ ಯಶ್ ಗೆ ಧಿಕ್ಕಾರ ಎಂದು ಕೂಗಿದ್ದಾರೆ.