ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ಗೆ ಸಂಬಂಧಪಟ್ಟಂತೆ ಕೊನೆಗೂ ಪೊಲೀಸರು ನ್ಯಾಯಾಲಯಕ್ಕೆ ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 3991 ಪುಟಗಳ ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ಕುತೂಹಲಕಾರೀ ಅಂಶಗಳಿವೆ.
ಆರಂಭದಲ್ಲೇ ನಟ ದರ್ಶನ್ ಎ2 ಆರೋಪಿ ಮತ್ತು ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರು. ಇದೀಗ ಚಾರ್ಜ್ ಶೀಟ್ ಸಲ್ಲಿಕೆ ವೇಳೆ ದರ್ಶನ್ ಎ1 ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ಅವರು ಎ2 ಆಗಿಯೇ ಮುಂದುವರಿದಿದ್ದಾರೆ. ಇದು ದರ್ಶನ್ ಗೆ ಕೊಂಚ ರಿಲೀಫ್ ನೀಡಲಿದೆ.
ಪವಿತ್ರಾ ಎ1 ಆರೋಪಿ, ದರ್ಶನ್ ಎ2 ಆರೋಪಿಯಾಗಿ ಮುಂದುವರಿದಿದ್ದಾರೆ. ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿರುವ ಸತ್ಯಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದ್ದು, ಸಾಕಷ್ಟು ಕುತೂಹಲಕಾರೀ ಅಂಶಗಳು ಬಯಲಾಗಿದೆ. ಎಸಿಪಿ ಚಂದನ್ ಮತ್ತು ಪೊಲೀಸರ ತಂಡ ನಡೆಸಿದ ತನಿಖೆಯಲ್ಲಿ ಸಂಗ್ರಹಿಸಲಾದ ಎಲ್ಲಾ ಸಾಕ್ಷ್ಯಗಳನ್ನೂ ಇಲ್ಲಿ ಉಲ್ಲೇಖ ಮಾಡಲಾಗಿದ್ದು, ದರ್ಶನ್ ಆಂಡ್ ಗ್ಯಾಂಗ್ ರನ್ನು ಲಾಕ್ ಮಾಡಲಾಗಿದೆ.
ಸುಮಾರು 231 ಸಾಕ್ಷ್ಯಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಸಿಸಿಟಿವಿ ಫೂಟೇಜ್, ಪ್ರತ್ಯಕ್ಷ ಸಾಕ್ಷ್ಯಗಳು, ಕಡತಗಳ ಸಾಕ್ಷ್ಯ ಒದಗಿಸಲಾಗಿದೆ. ಸಾಕ್ಷಿಗಳ ಪೈಕಿ ಮೂವರು ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ದರ್ಶನ್ ವಿರುದ್ಧ ಸಿಸಿಟಿವಿ ಫೂಟೇಜ್, ಆರೋಪಿಗಳ ಹೇಳಿಕೆ, ಎಫ್ಎಸ್ಎಲ್ ವರದಿಗಳು ಪ್ರಬಲ ಸಾಕ್ಷ್ಯಗಳಾಗಿವೆ. ರೇಣುಕಾಸ್ವಾಮಿ ಕೊಲೆಗೆ ಮೂಲ ಕಾರಣ ಪವಿತ್ರಾ ಗೌಡ. ಹೀಗಾಗಿ ಅವರು ಎ1 ಆಗಿದ್ದಾರೆ. ಪವಿತ್ರಾ ಚಪ್ಪಲಿಯಿಂದ ಹೊಡೆದಿರುವುದು, ಕೃತ್ಯ ನಡೆದ ವೇಳೆ ಪವಿತ್ರಾ ಸ್ಥಳದಲ್ಲಿದ್ದಿದ್ದಕ್ಕೆ ಸಿಸಿಟಿವಿ ದೃಶ್ಯಗಳು, ಮೊಬೈಲ್ ಸಿಗ್ನಲ್ ಸಾಕ್ಷ್ಯಗಳಿವೆ. 59 ಜನರನ್ನು ಪಂಚನಾಮೆಗೆ ಬಳಸಲಾಗಿದೆ. ತಹಶೀಲ್ದಾರ್, ಆರ್ ಟಿಒ ಅಧಿಕಾರಿಗಳು, ಇಂಜಿನಿಯರ್ ಗಳು ಸಾಕ್ಷಿಗಳಾಗಿದ್ದಾರೆ. ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳೂ ಮಿಸ್ ಆಗದಂತೆ ಪೊಲೀಸರು ಎಚ್ಚರಿಕೆ ವಹಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.