ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ’ಕನಕ’ ಚಿತ್ರದ ಪೋಸ್ಟರ್ ಶುಕ್ರವಾರ ಬಿಡುಗಡೆದ ದಿನವೇ ವಿವಾದಕ್ಕೆ ಗುರಿಯಾಯಿತು. ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಭಾರಿ ಚರ್ಚೆ ವಾದ ವಿವಾದಗಳು ಶುರುವಾಗಿ ಕಡೆಗೆ ಆರ್ ಚಂದ್ರು ಕ್ಷಮೆ ಕೋರಿದ ಘಟನೆ ನಡೆದಿದೆ.
ಚಂದ್ರು ಹೊಸಚಿತ್ರ "ಕನಕ' ಟ್ಯಾಗ್ ಲೈನ್ "ಅಣ್ಣಾವ್ರ ಅಭಿಮಾನಿ" ಅಂತಿದೆ. ಆದರೆ ಟೈಟಲ್ ಮೇಲೆ ಗರ್ಜಿಸೋ ಸಿಂಹಾನದ್ರೂ ಬಗುದುಬಿಡ್ತೀನಿ.. ಎನ್ನುವ ಡೈಲಾಗ್ ಇದೆ. ಇದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳನ್ನು ಕೆರಳಿಸಿತ್ತು.
"ಕರ್ನಾಟಕದಲ್ಲಿ ಸಿಂಹ ಅಂದ್ರೆ ವಿಷ್ಣುದಾದಾ ಮಾತ್ರ ನೆನಪಾಗ್ತಾರೆ" ಅನ್ನೋದು ನಿಮಗೆ ಗೊತ್ತಿಲ್ಲದ ವಿಷ್ಯವೇನಲ್ಲ.ಅಂತಹುದರಲ್ಲಿ "ಅಣ್ಣಾವ್ರ ಅಭಿಮಾನಿ" ಅನ್ನುವ ಟ್ಯಾಗ್ಲೈನ್ ಇರೋ ಸಿನಿಮಾದಲ್ಲಿ "ಗರ್ಜಿಸೋ_ಸಿಂಹಾನ_ಬಗುದುಬಿಡ್ತೀನಿ ಅನ್ನೋ ಡೈಲಾಗ್ ಎಷ್ಟು ಸರಿ.?? ಅಭಿಮಾನಿಗಳು ಅದನ್ನು ಯಾವ ರೀತಿ ಸ್ವೀಕರಿಸ್ತಾರೆ ಅನ್ನೋ ವಿಷ್ಯ ನಿಮಗೆ ಗೊತ್ತಿಲ್ಲವೇ?? ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರ ನೀಡಿರುವ ಚಂದ್ರು ತನ್ನಿಂದ ತಪ್ಪಾಗಿದೆ. ನನ್ನ ಬರಹ ಈ ರೀತಿ ಅರ್ಥ ಕೊಡುತ್ತದೆ ಎಂದುಕೊಂಡಿರಲ್ಲ ಎಂದಿದ್ದಾರೆ. ಅವರ ಪತ್ರದ ಸಂಪೂರ್ಣ ವಿವರ ಇಲ್ಲಿದೆ ನೋಡಿ. "ನಾನು ಈ ಸಂಭಾಷಣೆ ಬರೆದಾಗ, ಅಂತಹ ಮೇರು ನಟನಿಗೆ ಹೋಲಿಕೆಯಾಗಬಹುದೆಂದು ಅನಿಸಿರಲಿಲ್ಲ. ಕೆಟ್ಟ ಉದ್ದೇಶವು ನನಗೆ ಇರಲಿಲ್ಲ. ಇರುವುದಿಲ್ಲ ಕೂಡ.
ನಾನು ಕೂಡ ಅಣ್ಣಾವ್ರು.., ವಿಷ್ಣು ಸರ್.., ಶಂಕ್ರಣ್ಣ ಇವರುಗಳ ಸಿನಿಮಾಗಳನ್ನು ನೋಡುತ್ತಾ, ಆದರ್ಶಗಳನ್ನು ಪಾಲಿಸುತ್ತಾ ಚಿತ್ರರಂಗಕ್ಕೆ ಬಂದವನು.ಅಂತಹ ಮಹಾನ್ ದೇವರುಗಳ ಹೆಸರಿಗೆ ಕಳಂಕ ತರುವ ಕೆಲಸವನ್ನ ಯಾವ ಕನ್ನಡಿಗನೂ ಮಾಡಬಾರದು. ನಾನೂ ಮಾಡುವುದಿಲ್ಲ.
ನಾನು ಈಗ ನಿರ್ದೇಶಿಸಲು ಹೊರಟಿರುವ "ಕನಕ" ಚಿತ್ರದಲ್ಲಿ ದುನಿಯಾ ವಿಜಯ್ ರವರ ಪಾತ್ರ "ಹುಲಿ"ಯಂತಿದ್ದ ಕಾರಣಕ್ಕೆ "ಹುಲಿ"ಗೆ ಹುಲಿಯೇ ಬಗಿದರೆ ಅನರ್ಥವಾಗಿರುತಿತ್ತು. ಹಾಗಾಗಿ "ಸಿಂಹ"ದ ಹೆಸರು ಬಳಸಿದೆ. ಕಥೆಗೊಸ್ಕರ ಬಳಸಿದ ಪದವಷ್ಟೆ. ಈಗ ಅದು ನಿಮ್ಮ ಅನಿಸಿಕೆಯಂತೆ ವಿಷ್ಣುಸರ್ ರವರನ್ನು ನೆನಪಿಸುತ್ತದೆ ಎನ್ನುವುದಾದರೆ ಈ ಸಂಭಾಷಣೆಯನ್ನ "ಕನಕ" ಚಿತ್ರದಲ್ಲಿ ಖಂಡಿತ ಬಳಸಿಕೊಳ್ಳುವುದಿಲ್ಲ.
ನಿಮಗೆ ನೋವಾಗಿದ್ದರೆ ಕ್ಷಮೆ ಇರಲಿ. ಕಾಕತಾಳಿಯ ಈ ಸಂಧರ್ಭ ಯಾರಿಗೂ ನೋವುಂಟು ಮಾಡದಿರಲಿ. ನಾವೆಲ್ಲರೂ... ಕನ್ನಡ ತಾಯಿಯ ಮಕ್ಕಳು. ನಮ್ಮಲ್ಲಿ ಹಗೆತನ ಬೇಡ. ಕನ್ನಡ ಉಳಿಸೋಣ. ಕನ್ನಡ ಚಿತ್ರರಂಗ ಬೆಳೆಸೋಣ ಎಂದಿದ್ದಾರೆ ಆರ್.ಚಂದ್ರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.