ಬಾಹುಬಲಿ ನಂತರದಲ್ಲಿ ಪ್ರಭಾಸ್ ನಟಿಸಿರೋ ಸಾಹೋ ಚಿತ್ರ ಬಿರುಗಾಳಿಯಂತೆ ಬಂದಪ್ಪಳಿಸಿದ ರೀತಿಯಿಂದ ಕನ್ನಡ ಚಿತ್ರಗಳು ಕರ್ನಾಟಕದಲ್ಲಿಯೇ ನೆಲೆ ಇಲ್ಲದಂತೆ ಪರದಾಡಿದ್ದು ನಿಜ. ಅಷ್ಟಕ್ಕೂ ಇಂಥಾ ಯಾವುದೇ ಪರಭಾಷಾ ಚಿತ್ರಗಳು ಬಿಡುಗಡೆಯಾದಾಗಲೂ ಕೂಡಾ ಕನ್ನಡ ಚಿತ್ರಗಳಿಗೆ ಇಂಥಾದ್ದೇ ದುಃಸ್ಥಿತಿ ಬಂದೊದಗುತ್ತದೆ.
ಈ ಬಾರಿ ಯಶಸ್ವೀ ಪ್ರದರ್ಶನ ಕಾಣುತ್ತಿದ್ದ, ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದ ನನ್ನಪ್ರಕಾರ ಚಿತ್ರವೂ ಸಾಹೋ ಬಿರುಗಾಳಿಗೆ ನಲುಗಿ ಹೋಗುತ್ತದಾ ಎಂಬಂಥಾ ಆತಂಕವೊಂದು ಇದ್ದೇ ಇತ್ತು. ಆದರೆ ಈ ಚಿತ್ರ ಸಾವರಿಸಿಕೊಂಡು ಭರ್ಜರಿ ಪ್ರದರ್ಶನದೊಂದಿಗೆ ಯಶ ಕಂಡಿದೆ.
ವಿನಯ್ ಬಾಲಾದಿತ್ಯ ನಿರ್ದೇಶನದಲ್ಲಿ ಮೂಡಿ ಬಂದಿದ್ದ ನನ್ನಪ್ರಕಾರ ವಿಭಿನ್ನವಾದ ಕಥಾ ಹಂದರ ಹೊಂದಿರೋ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಚಿತ್ರ. ಈ ಜಾನರಿನ ಸಿದ್ಧಸೂತ್ರಗಳನ್ನು ಮೀರಿಕೊಂಡು ರೂಪುಗೊಂಡಿದ್ದ ನನ್ನಪ್ರಕಾರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಆದರೆ ಸಾಹೋ ತೆರೆ ಕಂಡ ಘಳಿಗೆಯಲ್ಲಿ ಇದಕ್ಕೂ ಕೊಂಚ ಹಿನ್ನಡೆಯಾಗಿತ್ತಾದರೂ ಅಂಜದೇ ಮುಂದುವರೆದಿತ್ತು. ಇದೀಗ ಸಾಹೋ ಅಖಾಡದಿಂದಲೇ ಹೊರ ಬಿದ್ದಿದೆ. ನನ್ನಪ್ರಕಾರ ಹೆಚ್ಚು ಥಿಯೇಟರ್ಗಳನ್ನು ದಕ್ಕಿಸಿಕೊಂಡು ಮಲ್ಟಿಫ್ಲೆಕ್ಸ್ಗಳಲ್ಲಿಯೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
ಕಿಶೋರ್, ಪ್ರಿಯಾಮಣಿ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರದ್ದು ಹೊಸತನ ಹೊಂದಿರೋ ಕಥೆ. ಅಚ್ಚರಿದಾಯಕ ನಿರೂಪಣೆಯಿಂದ, ಒಂದರೆಕ್ಷಣವೂ ಆಚೀಚೆ ಕದಲದಂತೆ ಹಿಡಿದಿಡೋ ಕಸುಬುದಾರಿಕೆಯಿಂದ ವಿನಯ್ ಬಾಲಾಜಿ ಈ ಸಿನಿಮಾವನ್ನು ರೂಪಿಸಿದ್ದಾರೆ.
ಇದೀಗ ಬಾಯಿಂದ ಬಾಯಿಗೆ ಹರಡಿಕೊಳ್ಳುತ್ತಿರೋ ಒಳ್ಳೆ ಅಭಿಪ್ರಾಯಗಳಿಂದ ಮತ್ತೆ ಹೌಸ್ ಫುಲ್ ಪ್ರದರ್ಶನ ಶುರುವಾಗಿದೆ. ಸಾಹೋದಂಥಾ ಭಾರೀ ಬಜೆಟ್ಟಿನ ಚಿತ್ರಕ್ಕೇ ಸ್ಪರ್ಧೆಯೊಡ್ಡಿ ಗೆದ್ದ ಖುಷಿ ಚಿತ್ರತಂಡದಲ್ಲಿದೆ.