ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮತ್ತೆ ತೆರೆಗೆ ತಂದಿರುವ, ಬಹುನಿರೀಕ್ಷಿತ 'ನಾಗರಹಾವು' ಸಿನಿಮಾ ಇಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ.
ಬೆಂಗಳೂರಿನ ಭೂಮಿಕಾ ಚಿತ್ರ ಮಂದಿರ ಸೇರಿದಂತೆ ವಿವಿಧೆಡೆ ಇಂದು ಬೆಳಿಗ್ಗೆ 7 ಗಂಟೆಯಿಂದ ಶೋ ಪ್ರಾರಂಭವಾಗಿದೆ.
ಭೂಮಿಕಾ ಥಿಯೇಟರ್ ಬಳಿ ವಿಷ್ಣುವರ್ಧನ್ ಮತ್ತು ದರ್ಶನ್ ಅವರ ಭಾರಿ ಗಾತ್ರದ ಕಟೌಟ್ ಹಾಕಲಾಗಿದ್ದು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.
ದೈಹಿಕವಾಗಿ ಅಗಲಿದರು, ಜನಮಾನಸದಲ್ಲಿ ಸದಾ ರಾರಾಜಿಸುತ್ತಿರುವ ವಿಷ್ಣುವರ್ಧನ್ ಅವರ 201ನೇ ಚಿತ್ರ ಎಂದು ಬಿಂಬಿಸಲ್ಪಡುತ್ತಿರುವ ಚಿತ್ರ ಇದಾಗಿದ್ದು ಡಿಜಿಟಲ್ ಹೆಡ್ ರೀಪ್ಲೇಸ್‌ಮೆಂಟ್ ತಂತ್ರಜ್ಞಾನದ ಮೂಲಕ ಮರು ಸೃಷ್ಟಿಸಲಾಗಿರುವುದು ಚಿತ್ರದ ಹೈಲೈಟ್. ರಮ್ಯಾ, ದೂದ್‌ಪೇಡಾ ದಿಗಂತ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಾಯಿಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರೆ, ಚಾಲೆಜಿಂಗ್ ಸ್ಟಾರ್ ದರ್ಶನ್ ವಿಶೇಷ ಹಾಡಿನಲ್ಲಿ ಬಂದು ಹೋಗುತ್ತಾರೆ.
ತೆಲುಗಿನ ಸೂಪರ್ ಹಿಟ್ ಚಿತ್ರ ಅರುಂಧತಿ ಚಿತ್ರ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನ, ಸಾಜೀದ್ ಖುರೇಷಿ ನಿರ್ಮಾಣ, ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು 9 ನಿಮಿಷಗಳ ಕಾಲ ವಿಷ್ಣುದಾದಾರನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು.
ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಚಿತ್ರ ತೆರೆ ಕಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ