ಕೊಚ್ಚಿ: ಮಲಯಾಳ ಸಿನಿಮಾದ ಖ್ಯಾತ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಮುಖ ಆರೋಪಿ ಪಲ್ಸರ್ ಸುನಿ ಆಲಿಯಾಸ್ ಸುನಿಲ್ ಕುಮಾರ್ ಪೊಲೀಸರಿಗೆ ಶರಣಾಗಿದ್ದಾನೆ.
ಕಳೆದ ಶುಕ್ರವಾರ ನಟಿ ತನ್ನ ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದಾಗ ಆಕೆಯ ಮಾಜಿ ಕಾರು ಚಾಲಕನ ಸಹಾಯದೊಂದಿಗೆ ಪಲ್ಸರ್ ಸುನಿ ಹಾಗೂ ತಂಡ ಕಾರಿನಲ್ಲಿ ಆಕೆಯನ್ನು ತಡೆಹಿಡಿದಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಪೊಲೀಸರು ಬಂಧಿಸಿದರೂ ಪ್ರಮುಖ ಆರೋಪಿ ಸುನಿ ತಲೆ ಮರೆಸಿಕೊಂಡಿದ್ದ. ಇದೀಗ ತಾನೇ ಖುದ್ದಾಗಿ ಕೊಚ್ಚಿಯ ಸಿಜೆಎಂ ನ್ಯಾಯಾಲಯಕ್ಕೆ ಹಾಜರಾಗಿ ಪೊಲೀಸರಿಗೆ ಶರಣಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದರು. ಆತ ಖ್ಯಾತ ನಟ-ನಿರ್ದೇಶಕನ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಇದಲ್ಲದೆ ನಟಿಯ ಚಲನವಲನಗಳನ್ನು ಆಕೆಯ ಸಿನಿಮಾ ಸೆಟ್ ನಲ್ಲಿದ್ದವರೇ ಆರೋಪಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ