ಹೈದರಾಬಾದ್: ಮಹೇಶ್ ಬಾಬು ಮತ್ತು ಎಸ್ ಎಸ್ ರಾಜಮೌಳಿ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾಗೆ ಟೈಟಲ್ ರೆಡಿಯಾಗಿದೆ.
ಈ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಶುರುವಾಗಿದೆ. ಇದೇ ವರ್ಷ ರಾಜಮೌಳಿ ಚಿತ್ರೀಕರಣವನ್ನೂ ಆರಂಭಿಸಲಿದ್ದಾರೆ. ಇದಕ್ಕೆ ಮೊದಲು ಚಿತ್ರದ ಶೀರ್ಷಿಕೆ ಫೈನಲ್ ಆಗುತ್ತಿದೆ. ಪ್ಯಾನ್ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗೆ ಎರಡು ಟೈಟಲ್ ಅಂತಿಮಗೊಳಿಸಲಾಗಿದೆ. ಚಕ್ರವರ್ತಿ ಅಥವಾ ಮಹಾರಾಜ ಎಂದು ಟೈಟಲ್ ಇಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಪೈಕಿ ಯಾವುದನ್ನು ಸೆಲೆಕ್ಟ್ ಮಾಡಲಾಗುತ್ತದೆ ಕಾದು ನೋಡಬೇಕಿದೆ. ಸಾಮಾನ್ಯವಾಗಿ ರಾಜಮೌಳಿ ತಮ್ಮ ಸಿನಿಮಾಗೆ ಐತಿಹಾಸಿಕ ಹಿನ್ನಲೆಯುಳ್ಳ ಶೀರ್ಷಿಕೆಯನ್ನೇ ಇಡುತ್ತಾರೆ.ಈ ಬಾರಿಯೂ ಅದು ಮುಂದುವರಿಯಲಿದೆ.
ಮಹೇಶ್ ಬಾಬು-ರಾಜಮೌಳಿ ಕಾಂಬಿನೇಷನ್ ನ ಸಿನಿಮಾ ಚಿತ್ರೀಕರಣ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆಯಲಿದ್ದು, ಇದುವರೆಗೆ ನೋಡದಂತಹ ಮೈನವಿರೇಳಿಸುವ ಸಾಹಸ ದೃಶ್ಯಗಳಿರಲಿವೆ ಎನ್ನಲಾಗಿದೆ. ಇದಕ್ಕೆ ಈಗಾಗಲೇ ಮಹೇಶ್ ಬಾಬು ವಿದೇಶಕ್ಕೆ ಹೋಗಿ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಅತ್ತ ರಾಜಮೌಳಿ ಕೂಡಾ ಹಾಲಿವುಡ್ ಸ್ಟಂಟ್ ನಿರ್ದೇಶಕರು, ಗ್ರಾಫಿಕ್ಸ್ ವಿನ್ಯಾಸಕರ ಜೊತೆ ಕೈ ಜೋಡಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಹಿಂದೆಂದೂ ಕಾಣದಷ್ಟು ಶ್ರೀಮಂತವಾಗಿ ಮೂಡಿಬರಲಿದೆ.