ಬೆಂಗಳೂರು: ಕೊನೆಗೂ ಕಾಂತಾರ ಸಿನಿಮಾ ನಿರೀಕ್ಷೆಯಂತೇ ಒಟಿಟಿಗೆ ಬಂದಿದೆ. ಇಂದಿನಿಂದ ಅಮೆಝೋನ್ ಪ್ರೈಮ್ ನಲ್ಲಿ ಕಾಂತಾರ ಪ್ರಸಾರವಾಗುತ್ತಿದೆ.
ಇದೀಗ ಹಿಂದಿ ಹೊರತುಪಡಿಸಿ ಉಳಿದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಪ್ರಸಾರವಾಗಲಿದೆ. ಸದ್ಯಕ್ಕೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಕಾಂತಾರ ಪ್ರಸಾರವಾಗುತ್ತಿದೆ.
ಆದರೆ ಥಿಯೇಟರ್ ನಲ್ಲಿ ಕ್ಲೈಮ್ಯಾಕ್ಸ್ ನೋಡಿದವರಿಗೆ ಒಟಿಟಿಯಲ್ಲಿ ನೋಡುವಾಗ ಅಚ್ಚರಿಯೊಂದು ಕಾದಿದೆ. ಕ್ಲೈಮ್ಯಾಕ್ಸ್ ನಲ್ಲಿ ಹಿಟ್ ಆಗಿದ್ದ ವರಾಹ ರೂಪಂ ಹಾಡು ಪ್ರಸಾರ ಮಾಡದಂತೆ ಈಗಾಗಲೇ ಕೇರಳ ಹೈಕೋರ್ಟ್ ತಡೆ ನೀಡಿತ್ತು. ಹೀಗಾಗಿ ಕೋರ್ಟ್ ಆದೇಶ ಪಾಲಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಚಿತ್ರತಂಡ ಕ್ಲೈಮ್ಯಾಕ್ಸ್ ನಲ್ಲಿದ್ದ ವರಾಹ ರೂಪಂ ಹಾಡಿನ ದಾಟಿ ಬದಲಿಸಿ ಬಳಸಲಾಗಿದೆ. ಆದರೆ ಇದು ಮೊದಲಿನ ವರಾಹ ರೂಪಂ ಹಾಡಿನಷ್ಟು ಪರಿಣಾಮಕಾರಿಯಾಗಿಲ್ಲ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹೊಂಬಾಳೆ ಫಿಲಂಸ್ ಕೂಡಾ ಥೈಕುಡಂ ಬ್ರಿಡ್ಜ್ ಸಲ್ಲಿಸಿರುವ ತಡೆ ಅರ್ಜಿಗೆ ಮೇಲ್ಮನವಿ ಸಲ್ಲಿಸಿದ್ದು, ಮತ್ತೆ ಹಳೆಯ ವರಾಹ ರೂಪಂ ಹಾಡು ಬಳಸಲು ಅವಕಾಶ ಕೊಡುವಂತೆ ಮನವಿ ಮಾಡಿದೆ. ಆದರೆ ಕೇರಳ ಹೈಕೋರ್ಟ್ ಈ ಮೇಲ್ಮನವಿಯನ್ನು ತಳ್ಳಿ ಹಾಕಿದೆ.