ಅಗ್ರಜ ಚಿತ್ರದ ನಂತರ ಹೆಚ್.ಎಂ.ಶ್ರೀನಂದನ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಎರಡನೇ ಚಿತ್ರ ‘ಲೀ’. ಹಿರಿಯ ನಿರ್ಮಾಪಕ ಶೈಲೇಂದ್ರ ಬಾಬು ಅವರ ಪುತ್ರ ಸುಮತ್ ಶೈಲೇಂದ್ರ ಹಾಗೂ ವಜ್ರಕಾಯ ಖ್ಯಾತಿಯ ನಭಾ ನಟೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಸರ್ ಪುಟ್ಟಣ್ಣಶಟ್ಟಿ ಪುರಭವನ (ಟೌನ್ ಹಾಲ್) ದಲ್ಲಿ ವರ್ಣರಂಜಿತ ಸಮಾರಂಭದೊಂದಿಗೆ ನೆರವೇರಿತು.
ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಹಾಗೂ ಛೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆನಂದ ರಾಜವಿಕ್ರಮ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ 5 ಹಾಡುಗಳಿದ್ದು ವಚನ ಶ್ರೀರಾಮ ಎಲ್ಲಾ ಹಾಡುಗಳನ್ನು ರಚಿಸಿದ್ದಾರೆ. ಸಂತೋಷ ವೆಂಕಿ, ಚೇತನ್ ಗಂಧರ್ವ, ಅನುರಾಧ ಭಟ್, ಇತರರು ಹಾಡಿದ್ದಾರೆ.
ಗುರುಕಿರಣ್ ಅವರ ಹಿನ್ನೆಲೆ ಸಂಗೀತವಿರುವ ಈ ಚಿತ್ರವನ್ನು ಸಾರಥಿ ಸತೀಶ್ ದರ್ಶನ್ ಕೃಷ್ಣ ಹಾಗೂ ಎಸ್.ಬಿ.ವಿನಯ ನಿರ್ಮಾಣ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಶ್ರೀನಂದನ್ ಮಾತನಡಿ
‘ಬಹಳಷ್ಟು ದಿನಗಳ ಗ್ಯಾಪ್ ತಗೊಂಡು ಮಾಡಿರುವಂಥ ಚಿತ್ರವಿದು. ಸಾಹಸ ಕಲೆಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ರಚಿಸಿರುವ ಈ ಚಿತ್ರದಲ್ಲಿ ಸುಮಂತ್ ಅದ್ಭುತವಾದ ಅಭಿನಯ ನೀಡಿದ್ದಾರೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಸಧ್ಯದಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ ಇದೆ ಎಂದು ಹೇಳಿದರು.
ನಾಯಕನಟ ಸುಮಂತ್ ಮಾತನಾಡಿ ಮಾನಸಿಕ ಖಿನ್ನತೆಗೆ ಒಳಗಾಗಿರುವಂಥ ಯುವಕನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಈ ಪಾತ್ರಕ್ಕಾಗಿ ನಿಮ್ಹಾನ್ಸ್‍ನಲ್ಲಿ 3 ತಿಂಗಳು ಅಲ್ಲಿನ ರೋಗಿಗಳ ಜೊತೆ ಕಳೆದು ಬಂದಿದ್ದೇನೆ. ಅಲ್ಲದೆ ನನ್ನ ಪಾತ್ರಕ್ಕೆ 3 ಷೇಡ್ಸ್ ಇವೆ. ನಾನು ಮೂಲತಃ ಒಬ್ಬ ಡ್ಯಾನ್ಸರ್ ಆಗಿರುವುದರಿಂದ ಹಾಡುಗಳಲ್ಲಿ ಅಭಿನಯಿಸುವುದ ಅಂಥಾ ಕಷ್ಟವೇನೂ ಆಗಲಿಲ್ಲ. ಮಣಿಪುರಿಯ ಅಜಯಜೈನ್ ಅವರು ‘ಉಷ್’ ವಿದ್ಯೆಯಲ್ಲಿ ತರಬೇತಿ ನೀಡಿದರು. ಹಿಂದಿನ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರವನ್ನು ಮಾಡಿದ ಖುಷಿಯಿದೆ’ ಎಂದು ಹೇಳಿದರು.
ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ನಭಾ ನಟೇಶ್ ಮಾತನಾಡಿ ಹಳ್ಳಿಯ ಮುಗ್ದ ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಾಡುಗಳಲ್ಲಿ ಅಭಿನಯಿಸುವಾಗ ಪ್ರಾಕ್ಟೀಸ್ ಮಾಡಿಕೊಂಡೇ ಬ್ಯಾಂಕಾಕ್‍ಗೆ ಹೋಗಿದ್ದರಿಂದ ಬೇಗನೇ ಚಿತ್ರೀಕರಿಸಲು ಅನುಕೂಲವಾಯಿತು. ವಜ್ರಕಾಯ ಚಿತ್ರದ ಪಾತ್ರಕ್ಕೆ ವಿರುದ್ಧವಾದ ಗುಣವುಳ್ಳ ಪಾತ್ರವಿದು’ ಎಂದು ಹೇಳಿಕೊಂಡರು.
ಚಿತ್ರದ ಸಂಗೀತ ನಿರ್ದೇಶಕ ಆನಂದ ರಾಜವಿಕ್ರಮ್ ಮಾತನಾಡಿ ‘ನಾನು ಮೂಲತಃ ಸಿವಿಲ್ ಇಂಜಿನಿಯರ್ ಫಸ್ಟ್ ಟೈಂ ಈ ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಬೆಂಗಾಳಿ ಜಾನಪದ ಶೈಲಿ ಸೇರಿದಂತೆ 8 ರೀತಿಯ ಹಾಡುಗಳು ಈ ಚಿತ್ರದಲ್ಲಿವೆ’ ಎಂದು ಹೇಳಿದರು.
ಬಾಲಿವುಡ್‍ನಟ ರಾಹುಲ್‍ದೇವ್ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ಖಳನಟನಾಗಿ ಜೈಶಂಕರ್ ಅವರು ಅಭಿನಯಿಸಿದ್ದಾರೆ. ಮುಂಬೈ ಮೂಲದ ಸ್ನೇಹ ಈ ಚಿತ್ರದ 2 ಹಾಡುಗಳಲ್ಲಿ ಅಭಿನಯಿಸಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್ ‘ಸದ್ಯ ದೇಶದೆಲ್ಲೆಡೆ ಆರ್ಥಿಕ ಮುಗ್ಗಟ್ಟು ಇದೆ ಇಂಥ ಸಮಯದಲ್ಲೂ ಈ ತಂಡ ಒಂದು ಒಳ್ಳೆಯ ಸಿನಿಮಾವನ್ನು ಕನ್ನಡ ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಿದೆ. ಹೊಸ ಶೈಲಿಯಲ್ಲಿ ತಯಾರಾಗಿರುವ ಈ ಚಿತ್ರ ಪ್ರೇಕ್ಷಕರ ಹೃದಯವನ್ನು ಗೆಲ್ಲಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.