ಪಾಲಕ್ಕಾಡ್: ಮೋಹಿನಿಯಾಟ್ಟಂ ಎನ್ನುವುದು ನಮ್ಮ ಸಾಂಪ್ರದಾಯಿಕ ನೃತ್ಯ ಶೈಲಿಯಲ್ಲಿ ಒಂದು. ಈ ನೃತ್ಯಕ್ಕೆ ಅದರದ್ದೇ ಆದ ಪರಂಪರೆಯಿದೆ. ಆದರೆ ಮೋಹಿನಿಯಾಟ್ಟಂ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿದ ಕೇರಳದ ಪಾಲಕ್ಕಾಡ್ ನ ಜಿಲ್ಲಾ ನ್ಯಾಯಾಧೀಶ ಕಲಂ ಪಾಷಾ ವಿರುದ್ಧ ಈಗ ಆಕ್ರೋಶ ವ್ಯಕ್ತವಾಗಿದೆ.
ಪಾಲಕ್ಕಾಡ್ ನ ಸರ್ಕಾರಿ ಶಾಲೆಯೊಂದರಲ್ಲಿ ಖ್ಯಾತ ಕಲಾವಿದೆ ಡಾ.ನೀನಾ ಪ್ರಸಾದ್ ಮತ್ತು ತಂಡದವರಿಂದ ಮೋಹಿನಿಯಾಟ್ಟಂ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯ ಸಮೀಪವೇ ಜಡ್ಜ್ ಕಲಂ ಪಾಷಾ ನಿವಾಸವಿದೆ.
ಆದರೆ ಈ ನೃತ್ಯ ಕಾರ್ಯಕ್ರಮದ ಧ್ವನಿ ವರ್ಧಕದಿಂದಾಗಿ ನಿದ್ದೆ ಮಾಡಲಾಗುತ್ತಿಲ್ಲ. ಕಿರಿ ಕಿರಿಯಾಗುತ್ತಿದೆ ಎಂದು ತಮ್ಮ ಅಧಿಕಾರ ಬಳಸಿ ಪೊಲೀಸರನ್ನು ಕಳುಹಿಸಿ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು. ಇದರಿಂದಾಗಿ ಕಲಾವಿದೆ ನೀನಾ ಪ್ರಸಾದ್ ಮತ್ತು ಬಳಗ ಕಣ್ಣೀರಿಡುತ್ತಾ ವೇದಿಕೆಯಿಂದ ಹೊರನಡೆದಿತ್ತು. ಈ ಬಗ್ಗೆ ನೀನಾ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಯ ನಂತರ ನೆಟ್ಟಿಗರು ಜಡ್ಜ್ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.