ಬೆಂಗಳೂರು: ನವರಸನಾಯಕ ಜಗ್ಗೇಶ್ ಕೆಲವು ದಿನಗಳ ಹಿಂದೆ ಸಿನಿಮಾ ರೇಟಿಂಗ್ ಎಲ್ಲಾ ಬೋಗಸ್ ಎಂದಿದ್ದರು. ಇದು ಕಾಂತಾರ ಸಿನಿಮಾ ಪ್ರೇಮಿಗಳನ್ನು ರೊಚ್ಚಿಗೆಬ್ಬಿಸಿತ್ತು.
ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗೊಳಗಾಗಿದ್ದರು. ಇದೀಗ ಅಮೆರಿಕಾ ಪ್ರವಾಸದಲ್ಲಿರುವ ಜಗ್ಗೇಶ್ ಅಲ್ಲಿಯೇ ಕಾಂತಾರ ವೀಕ್ಷಿಸಿ ಇನ್ ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಮೂಲಕ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾನು ಕನ್ನಡದ ಅನ್ನ ತಿಂದು ಬೆಳೆದವನು. ವಿದೇಶ ಪ್ರವಾಸದಲ್ಲಿರುವುದರಿಂದ ಕಾಂತಾರ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಅಮೆರಿಕಾದ ಡೆನ್ವರ್ ನಲ್ಲಿ ಒಂದು ಥಿಯೇಟರ್ ನಲ್ಲಿ ವೀಕ್ಷಿಸಲು ಅವಕಾಶ ಸಿಕ್ಕಿತು. ನಾನು ದಕ್ಷಿಣ ಕನ್ನಡದ ದೇವಾಲಯಗಳ ಭಕ್ತ. ನನ್ನ ಪ್ರಕಾರ ಇದು ಶ್ರೇಷ್ಠ ದೇವಭೂಮಿ. ಇಂಥಾ ನಾಡಿನಿಂದ ಹುಟ್ಟಿದ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಎಂಥಾ ಅದ್ಭುತ ಕೊಡುಗೆ. ಈ ಚಿತ್ರ ನೋಡುವಾಗ ಕೊನೆಯ 25 ನಿಮಿಷ ನಾನು ಎಲ್ಲಿದ್ದೇನೆಂದೇ ನನಗೆ ಮರೆತು ಹೋಯಿತು. ಇದು ರಿಷಬ್ ಮಾಡಿದ ಚಿತ್ರವಲ್ಲ, ಆತನ ವಂಶೀಕರ, ತಂದೆ-ತಾಯಿಯ ಆಶೀರ್ವಾದ. ನಶಿಸುತ್ತಿರುವ ಆಧ‍್ಯಾತ್ಮಿಕ ಭಾವನೆ ನೆನಪಿಸಲು ದೇವರೇ ಆತನ ಕೈಯಲ್ಲಿ ಇಂತಹದ್ದೊಂದು ಚಿತ್ರ ಮಾಡಿಸಿರಬೇಕು. ರಿಷಭನಿಗೆ ದೇವರು ನೂರ್ಕಾಲ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ. ಕನ್ನಡ ಚಿತ್ರರಂಗಕ್ಕೆ ಆತನ ಕಲಾಸೇವೆ ಮುಂದುವರಿಯಲಿ. ಕಾಂತಾರ ಸಿನಿಮಾ ಅಲ್ಲ. ರೋಮಾಂಚನ ಅನುಭವ ಎಂದು ಜಗ್ಗೇಶ್ ಹೊಗಳಿದ್ದಾರೆ.
ಹಾಗಿದ್ದರೂ ಕೆಲವರು ಅವರ ಈ ಮಾತುಗಳಿಗೆ ಟಾಂಗ್ ಕೊಟ್ಟಿದ್ದಾರೆ. ಕೊನೆಗೂ ನಿಮ್ಮ ಬಾಯಿಂದ ಇಂಥಾ ಮಾತು ಬಂತಲ್ಲ. ಗೌರವವನ್ನು ಈ ರೀತಿ ಕೊಟ್ಟು ತೆಗೆದುಕೊಳ್ಳಿ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಜಗ್ಗೇಶ್ ಕೂಡಾ ಪ್ರತಿಕ್ರಿಯಿಸಿದ್ದು, ಯಾರ ಮಾತಿಗೂ ನಾನು ಕ್ಯಾರ್ ಮಾಡೋನಲ್ಲ ಎಂದಿದ್ದಾರೆ.
-Edited by Rajesh Patil