ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಆರೋಪ ಮಾಡಿರುವ ಇಂದ್ರಜಿತ್ ಲಂಕೇಶ್ ಸಿಸಿಬಿ ಪೊಲೀಸರ ಮುಂದೆ ಇಂದು ವಿಚಾರಣೆಗೆ ಹಾಜರಾಗುವ ಮೊದಲು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗ ಶೇ. 95 ರಷ್ಟು ಸ್ವಚ್ಛವಾಗಿದೆ. ಕೇವಲ 5% ಮಂದಿ ಮಾತ್ರ ಡ್ರಗ್ ಜಾಲದಲ್ಲಿದ್ದಾರೆ. ಡ್ರಗ್ ವಿರುದ್ಧ ಅರಿವು ಮೂಡಿಸುವುದಷ್ಟೇ ನನ್ನ ಹೋರಾಟ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಇಂದ್ರಜಿತ್ ಸ್ಯಾಂಡಲ್ ವುಡ್ ಸ್ವಚ್ಛಗೊಳಿಸುವುದಷ್ಟೇ ನನ್ನ ಉದ್ದೇಶ ಎಂದಿದ್ದಾರೆ.
ನನಗೆ ಗೊತ್ತಿರುವ ಮಾಹಿತಿಯನ್ನು ಸಿಸಿಬಿಗೆ ಹೇಳಿದ್ದೇನೆ. ನನ್ನ ಬ್ಯಾಗ್ ನಲ್ಲಿ ಹಾರ್ಡ್ ಡಿಸ್ಕ್, ಐಪ್ಯಾಡ್ ಮಾತ್ರವಿದೆ. ದಾಖಲೆ ನೀಡಿಲ್ಲ ಎಂದರೆ ಸಿಸಿಬಿಯವರನ್ನೇ ಕೇಳಬೇಕು. ಅನಿಕಾ ಈಗಾಗಲೇ ಕೆಲವರ ಹೆಸರನ್ನು ಹೇಳಿದ್ದಾರೆ. ನಾನು ಈಗಾಗಲೇ ಸಿಸಿಬಿಗೆ ಸಾಕಷ್ಟು ಮಾಹಿತಿ ನೀಡಿದ್ದೇನೆ. ಕನ್ನಡ ಚಿತ್ರರಂಗದವರೇ ಸಿಸಿಬಿಗೆ ಸಹಕಾರ ನೀಡಿದರೆ ಡ್ರಗ್ ಜಾಲದ ಬಗ್ಗೆ ತನಿಖೆ ಮಾಡಲು ಸಹಕಾರಿಯಾಗುತ್ತದೆ’ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ನನಗೆ ರಕ್ಷಣೆ ಬೇಕಾಗಿಲ್ಲ. ಬೆಂಬಲ ಬೇಕು. ಹಲವಾರು ನಟರು, ನಿರ್ಮಾಪಕರು ನನಗೆ ಫೋನ್ ಮಾಡಿ ಬೆಂಬಲ ನೀಡಿದ್ದಾರೆ. ಕೆಲವರು ಮಾಧ‍್ಯಮಗಳ ಮುಂದೆ ದೈರ್ಯವಾಗಿ ಮಾತನಾಡಿದ್ದಾರೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದಿದ್ದಾರೆ.