ತಾಜ್ಮಹಲ್, ಚಾರ್ ಮಿನಾರ್ನಂಥಾ ಪ್ರೇಮಕಾವ್ಯಗಳನ್ನು ಕೊಟ್ಟ ಪ್ರತಿಭಾವಂತ ನಿರ್ದೇಶಕ ಆರ್. ಚಂದ್ರು. ಪ್ರೀತಿಯ ನವಿರು ಭಾವಗಳನ್ನು ಎಂಥವರೂ ಮರುಳಾಗುವಂತೆ ದೃಷ್ಯೀಕರಿಸೋದರಲ್ಲಿ ಚಂದ್ರು ಸಿದ್ಧಹಸ್ತರು. ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರ ಅಪಾರ ನಿರೀಕ್ಷೆಗಳ ಒಡ್ಡೋಲಗದಲ್ಲಿ ಇದೇ ತಿಂಗಳ ಹದಿನಾಲಕ್ಕನೇ ತಾರೀಕಿನಂದು ತೆರೆ ಕಾಣುತ್ತಿದೆ.
ಆರ್. ಚಂದ್ರು ಚಿತ್ರಗಳಿಗೆ ಎಲ್ಲ ವರ್ಗದ ಪ್ರೇಕ್ಷಕ ವರ್ಗವೂ ಫಿದಾ ಆಗಿದೆ. ಅದರಲ್ಲಿಯೂ ಅವರ ಚಿತ್ರಗಳು ಕುಟುಂಬ ಸಮೇತರಾಗಿ ಕೂತು ನೋಡುವಂಥವುಗಳೆಂಬ ಇಮೇಜೂ ಇದೆ. ಆದರೆ ಐ ಲವ್ ಯೂ ಚಿತ್ರದ ಟ್ರೈಲರುಗಳೇ ಆರ್ ಚಂದ್ರು ತಮ್ಮ ಪ್ರಸಿದ್ಧ ಜಾಡು ಬಿಟ್ಟು ಹೊಸಾ ಸಾಧ್ಯತೆಯತ್ತ ಮುಖ ಮಾಡಿದ್ದಾರಾ ಎಂಬ ಗುಮಾನಿಗೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಸ್ವತಃ ಚಂದ್ರು ಅವರೇ ನಿಖರವಾದ ಒಂದಷ್ಟು ವಿಚಾರವನ್ನು ಜಾಹೀರು ಮಾಡಿದ್ದಾರೆ.
ಈವರೆಗಿನ ಚಂದ್ರು ನಿರ್ದೇಶನದ ಚಿತ್ರಗಳೂ ಕುಟುಂಬ ಸಮೇತರಾಗಿ ನೋಡುವಂಥವುಗಳು. ಆದರೆ ಐ ಲವ್ ಯೂ ಚಿತ್ರ ಎಲ್ಲರೂ ಖಡ್ಡಾಯವಾಗಿ ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರ ಅನ್ನೋದು ಆರ್.ಚಂದ್ರು ಅವರ ಭರವಸೆ. ಇದಕ್ಕೆ ಕಾರಣ ಹಲವಾರಿವೆ. ಆದರೆ ಈಗ ಹೊರ ಬಿದ್ದಿರೋದು ಅದರ ಸಣ್ಣ ಸಣ್ಣ ಝಲಕುಗಳು ಮಾತ್ರ. ಚಂದ್ರು ಅವರೂ ಕೂಡಾ ಈ ಬಗ್ಗೆ ಸುಳಿವು ಬಿಟ್ಟು ಕೊಟ್ಟಿಲ್ಲವಾದರೂ ಒಂದು ಗಟ್ಟಿ ಕಥೆಯನ್ನು ಹೊಂದಿರೋ ಈ ಚಿತ್ರದಲ್ಲಿ ಜನ ಕುಟುಂಬ ಸಮೇತರಾಗಿ ನೋಡುವಂಥಾ ಅಂಶಗಳಿವೆ ಮತ್ತು ಅದರಲ್ಲೊಂದು ಸಂದೇಶವೂ ಇದೆಯಂತೆ. ನಿಜಕ್ಕೂ ಅಂಥಾ ಗಹನವಾದದ್ದು ಐ ಲವ್ ಯೂನಲ್ಲೇನಿದೆ ಎಂಬುದಕ್ಕೆ ಇದೇ ತಿಂಗಳ ಹದಿನಾಲಕ್ಕನೇ ತಾರೀಕಿನಂದು ನಿಖರವಾದ ಉತ್ತರ ಸಿಗಲಿದೆ.