ಬೆಂಗಳೂರು: ಕರ್ನಾಟಕ ವಾಣಿಜ್ಯ ಮಂಡಳಿ ಮನವಿ ಮೇರೆಗೆ ಶೂಟಿಂಗ್ ಹೊರತುಪಡಿಸಿ ಉಳಿದ ಕೆಲಸಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಈಗಾಗಲೇ ಧಾರವಾಹಿ ಶೂಟಿಂಗ್ ಗೆ ಅನುಮತಿ ನೀಡಿದ್ದ ಸರ್ಕಾರ ಇದೀಗ ಸಿನಿಮಾ ರಂಗದಲ್ಲೂ ತೆರೆಮರೆಯ ಕೆಲಸಗಳಿಗೆ ಒಪ್ಪಿಗೆ ನೀಡಿದೆ. ಸಾವಿರಾರು ಕಾರ್ಮಿಕರ ಹಿತ ಗಮನದಲ್ಲಿಟ್ಟುಕೊಂಡು ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಕೇವಲ 8 ಜನರನ್ನಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.
ಇದರಿಂದಾಗಿ ಡಬ್ಬಿಂಗ್, ಸಂಗೀತ ಸಂಯೋಜನೆ, ಗ್ರಾಫಿಕ್ಸ್ ಅಳವಡಿಕೆ ಇತ್ಯಾದಿ ತೆರೆ ಹಿಂದಿನ ಚಟುವಟಿಕೆಗಳು ನಡೆಯಲಿವೆ. ಹಲವು ಸಿನಿಮಾಗಳು ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಗಾಗಿ ಕಾದು ಕುಳಿತಿದ್ದು, ಸರ್ಕಾರ ನಿರ್ಧಾರದಿಂದ ಹಲವು ಸಿನಿಮಾಗಳಿಗೆ ಪ್ರಯೋಜನವಾಗಲಿದೆ.