ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಕನ್ನಡ ಪ್ರೇಕ್ಷಕರು ಮೆಚ್ಚಿಕೊಂಡಿದ್ದ, ಕರ್ನಾಟಕದ ಉದ್ದಗಲಕ್ಕು ಅಪಾರ ಸಖ್ಯೆಯಲ್ಲಿ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದೆಲ್ಲ ಅವರ ಲವರ್ ಬಾಯ್ ಲುಕ್ ಮೂಲಕವೇ. ಇದುವರೆಗೂ ಹಲವಾರು ಸಿನಿಮಾಗಳಲ್ಲಿ, ಥರ ಥರದ ಪಾತ್ರಗಳಲ್ಲಿ ನಟಿಸಿದರೂ ಲವರ್ ಬಾಯ್ ಛಾಯೆ ಮಾತ್ರ ಗಣೇಶ್ ಅವರ ವಿಶೇಷಣದಂತೆ ಹಾಗೆಯೇ ಉಳಿದುಕೊಂಡಿದೆ.
ಆದರೆ ಇದೀಗ ತೆರೆಗಾಣಲು ರೆಡಿಯಾಗಿರೋ ಗೀತಾ ಚಿತ್ರದ ಮೂಲಕ ಗಣೇಶ್ ಅವರ ಇಮೇಜ್ ಬದಲಾಗೋ ಮುನ್ಸೂಚನೆಗಳು ಬಲವಾಗಿಯೇ ಕಾಣಿಸಲಾರಂಭಿಸಿವೆ.
ಇತ್ತೀಚೆಗಷ್ಟೇ ಗೀತಾ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಹಾಡೊಂದರಲ್ಲಿ ಕನ್ನಡತನದ ಘಮಲು ಹರಡಿಕೊಂಡು ಅದು ಟ್ರೇಲರ್ನಲ್ಲಿ ಮತ್ತಷ್ಟು ಸ್ಪಷ್ಟವಾಗಿಯೇ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಗಣೇಶ್ ಲವರ್ ಬಾಯ್ ಆಗಿ ಪ್ರೇಮತುಂಬಿದ ಡೈಲಾಗುಗಳ ಮೂಲಕವೇ ಅಭಿಮಾನಿಗಳಲ್ಲಿ ಪುಳಕ ಮೂಡಿಸುತ್ತಿದ್ದರು. ಆದರೆ ಈ ಚಿತ್ರದಲ್ಲಿ ಮಾತ್ರ ಅವರು ಸದ್ದು ಮಾಡಿರೋದು ಕನ್ನಡತನದ ಕೆಚ್ಚು ತುಂಬಿಕೊಂಡ ಹೋರಾಟಗಾರನ ಗೆಟಪ್ಪಿನಲ್ಲಿ. ಈ ಪಾತ್ರದ ಮೂಲಕ ಗಣೇಶ್ ಅಬ್ಬರಿಸಿರೋ ರೀತಿ ಕಂಡು ಎಲ್ಲರೂ ಬೆರಗಾಗಿದ್ದಾರೆ. ಅವರಲ್ಲಿನ ಈ ರೂಪಾಂತರ ನಾನಾ ದಿಕ್ಕಿನ ಚರ್ಚೆಗಳಿಗೂ ಕಾರಣವಾಗಿದೆ.
ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕನ್ನಡಪರ ಹೋರಾಟ ಮಾತ್ರವೇ ಇದೆಯೆಂದುಕೊಳ್ಳಬೇಕಿಲ್ಲ. ಇಲ್ಲಿ ಪ್ರೇಮ ಕಥೆಯೂ ಇದೆ. ಆದರೆ ಅದು ಮಾಮೂಲಿ ಮೆಥೆಡ್ಡಿನ ಕಥೆಯಲ್ಲ. ಅದೂ ಕೂಡಾ ಮೂಲ ಕಥೆಯ ಬಿಂದುವಿಗೆ ಕನೆಕ್ಟ್ ಆಗಿರುವಂಥಾದ್ದು. ಈ ಚಿತ್ರದಲ್ಲಿ ಓರ್ವ ಪ್ರೇಮಿಯಾಗಿಯೂ ಕೂಡಾ ಡಿಫರೆಂಟಾಗಿಯೇ ಗಣೇಶ್ ಪ್ರೇಕ್ಷಕರನ್ನು ತಲುಪಲಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನದ ಈ ಸಿನಿಮಾ ಗಣೇಶ್ ಪಾಲಿಗೆ ಸ್ಪೆಷಲ್ ಮೂವಿ. ಅವರ ಹೋಂ ಬ್ಯಾನರಿನಲ್ಲಿ ನಿರ್ಮಾಣಗೊಂಡಿರೋ ಮೊದಲ ಚಿತ್ರವೆಂಬ ವಿಶೇಷತೆಯೂ ಗೀತಾಗಿದೆ. ಅದು ಮಾತ್ರವಲ್ಲದೇ ಒಟ್ಟಾರೆ ಚಿತ್ರದ ಕಥೆಯೂ ಅಷ್ಟೇ ವಿಶೇಷವಾಗಿದೆ.