ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಮೈಸೂರಿನಲ್ಲಿ ನಿರ್ಮಾಣವಾದ ಸ್ಮಾರಕ ಉದ್ಘಾಟನೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ.
ಜನವರಿ 29 ರಂದು ಭಾನುವಾರ ಮೈಸೂರಿನಲ್ಲಿ ಸ್ಮಾರಕ ಲೋಕಾರ್ಪಣೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಸ್ಮಾರಕ ಉದ್ಘಾಟಿಸಲಿದ್ದಾರೆ. ಈ ವೇಳೆ ವಿಷ್ಣುವರ್ಧನ್ ಕುಟುಂಬ ವರ್ಗದವರು ಉಪಸ್ಥಿತರಿರಲಿದ್ದಾರೆ.
ತಾವೆಲ್ಲರೂ ಅಭಿಮಾನಿಗಳು ಇಷ್ಟು ದಿನ ಕಾಯುತ್ತಿದ್ದಿರಿ. ಅದು ಈವತ್ತು ಈಡೇರುತ್ತಿದೆ. ಈ ಒಂದು ಕಾರ್ಯಕ್ರಮಕ್ಕೆ ತಾವೆಲ್ಲರೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬಂದು ಅಪ್ಪಾವ್ರು ಡಾ. ವಿಷ್ಣುವರ್ಧನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಜತ್ಕಾರ್ ಮನವಿ ಮಾಡಿದ್ದಾರೆ.
ಎಲ್ಲಾ ಅಂದುಕೊಂಡಂತೇ ಆಗಿದ್ದರೆ ಡಿಸೆಂಬರ್ 18 ರಂದು ಸ್ಮಾರಕ ಉದ್ಘಾಟನೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾಗುತ್ತಲೇ ಇತ್ತು. ಕೊನೆಗೂ ಈಗ ಮುಹೂರ್ತ ಕೂಡಿಬಂದಿದೆ. ಮೈಸೂರಿನ ಎಚ್.ಡಿ. ಕೋಟೆ ತಾಲೂಕಿನ ಹಾಲಾಳು ಸಮೀಪ ಸ್ಮಾರಕ ನಿರ್ಮಾಣವಾಗಿದೆ.
ವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಇರಿಸಿ ಪುತ್ಥಳಿ ನಿರ್ಮಿಸಲಾಗಿದೆ. ಅವರ ಸುಮಾರು 600 ಫೋಟೋಗಳ ಗ್ಯಾಲರಿ ಕೂಡಾ ಇಲ್ಲಿರಲಿದೆ. ಜೊತೆಗೆ ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಅಡಿಟೋರಿಯಂ, ಕ್ಲಾಸ್ ರೂಂ, ಕ್ಯಾಂಟೀನ್ ಏರಿಯಾ ಸೇರಿದಂತೆ ಹಲವು ವಿಶೇಷತೆಗಳು ಇಲ್ಲಿರಲಿವೆ.