ಬೆಂಗಳೂರು: ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್ ಕುಮಾರ್ ಅವರ ಪುಣ್ಯತಿಥಿ ಇಂದು. 2006 ರ ಏಪ್ರಿಲ್ 12 ರಂದು ಡಾ.ರಾಜ್ ಕುಮಾರ್ ಎಂಬ ಮೇರು ನಟ ನಮ್ಮನ್ನೆಲ್ಲಾ ಅಗಲಿದ್ದರು.
ಎಷ್ಟೇ ದೊಡ್ಡ ನಟನಾದರೂ ಅಣ್ಣಾವ್ರು ಇಂದಿಗೂ ಅಭಿಮಾನಿಗಳ ಮೇಲಿನ ಪ್ರೀತಿ, ಸರಳತೆ, ಮುಗ್ಧತೆಯಿಂದಲೇ ಎಲ್ಲರ ಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಯೋಗ ಮಾಡಿಕೊಂಡು ಆರೋಗ್ಯವಾಗಿದ್ದ ಅವರಿಗೆ ಕೊನೆಗಾಲದಲ್ಲಿ ಮಂಡಿ ನೋವು ತೀರಾ ತೊಂದರೆ ಕೊಟ್ಟಿತ್ತು. ಹೀಗಾಗಿ ಅಭಿನಯ ಅಪರೂಪವಾಗಿತ್ತು.
ಅಣ್ಣಾವ್ರು ತೀರಿಕೊಂಡಾಗ ಅವರಿಗೆ 76 ವರ್ಷವಾಗಿತ್ತು. ಸದಾಶಿವನಗರದ ತಮ್ಮ ಮನೆಯಲ್ಲಿಯೇ ಅವರು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರು. ಅವರು ತೀರಿಕೊಂಡ ಸುದ್ದಿ ಕೇಳಿ ಇಡೀ ಕರ್ನಾಟಕವೇ ಶೋಕಸಾಗರದಲ್ಲಿ ಮುಳುಗಿತ್ತು. ಅಭಿಮಾನಿಗಳು ದಾಂಧಲೆ ಎಬ್ಬಿಸಿದ್ದರು.
ಕೊನೆಯ ಗಳಿಗೆಯಲ್ಲಿ ಅಣ್ಣಾವ್ರು ಉಪ್ಪಿಟ್ಟು ತಿಂದಿದ್ದರಂತೆ. ಅಣ್ಣಾವ್ರಿಗೆ ಉಪ್ಪಿಟ್ಟು ಎಂದರೆ ಭಾರೀ ಇಷ್ಟ. ಹೀಗಾಗಿ ಅವರೇ ಕೇಳಿ ಮಾಡಿಸಿಕೊಂಡಿದ್ದರು ಎಂದು ಪಾರ್ವತಮ್ಮ ರಾಜ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.