ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಸೆಟ್ ನಲ್ಲಿ ನಡೆದ ಮನಸ್ತಾಪ ಈಗ ತಾರಕಕ್ಕೇರಿದೆ. ನಿರ್ಮಾಪಕ ಆರೂರು ಜಗದೀಶ್ ಅವರ ಹೇಳಿರುವ ಅಡಿಯೋ ಒಂದು ಈಗ ವೈರಲ್ ಆಗಿದೆ.
ಮೊದಲು ಎಲ್ಲವೂ ಚೆನ್ನಾಗಿತ್ತು. ಆದರೆ ಧಾರವಾಹಿಗೆ ಖ್ಯಾತಿ ಬಂದ ಮೇಲೆ ಅವರ ವರ್ತನೆಯೇ ಬದಲಾಗಿದೆ. ಹಿಂದಿನ ದಿನವೇ ಅವರಿಗೆ ಡೈಲಾಗ್ ಪೇಪರ್ ಎಲ್ಲಾ ಹೋಗ್ತಿತ್ತು. ಒಂದು ವೇಳೆ ಹೋಗದೇ ಇದ್ದರೆ ಅವರು ಶೂಟಿಂಗ್ ಗೇ ಬರ್ತಿರಲಿಲ್ಲ. ಅಷ್ಟೆಲ್ಲಾ ಆದ ಮೇಲೂ ಮೇಕಪ್ ಹಾಕಿಕೊಂಡು ಕ್ಯಾಮರಾ ಮುಂದೆ ನಿಂತುಕೊಂಡಾಗ ಈ ಡೈಲಾಗ್ ಯಾಕೆ, ಈ ಸೀನ್ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದರು. ಬರೀ ಚರ್ಚೆಗಳಲ್ಲೇ ದಿನಕ್ಕೆ 2-3 ಗಂಟೆ ವೇಸ್ಟ್ ಆಗ್ತಿತ್ತು. ಹೀಗಾದ್ರೆ ನಾವು ಏನು ಫೂಟೇಜ್ ಕೊಡಕ್ಕೆ ಸಾಧ್ಯ?
ಪ್ರತೀ ಸನ್ನಿವೇಶ ಆದ ಮೇಲೆ ಮಾನಿಟರ್ ನೋಡಬೇಕು ಎನ್ನೋದು, ಇನ್ನೂ ಚೆನ್ನಾಗಿ ಮಾಡ್ತೀನಿ ಎನ್ನೋದು. ಇದರಿಂದ ಸಮಯ ಹಾಳು. ನಾವು ಪದೇ ಪದೇ ಇದು ಸಿನಿಮಾ ಅಲ್ಲ, ಧಾರವಾಹಿ ಎಂದು ನೆನಪು ಮಾಡ್ತಿದ್ದೆವು. ಆದರೂ ಅವರಿಗೆ ಅರ್ಥವಾಗ್ತಿಲ್ಲ. ಮೊದಲು ಬೀದಿ ಬದಿಯಲ್ಲಿ ತಿಂಡಿ ತಿನ್ಕೊಂಡು ಶೂಟಿಂಗ್ ಮಾಡ್ತಿದ್ದೆವು. ಈಗ ಅವರಿಗೆ ಕ್ಯಾರಾವ್ಯಾನೇ ಬೇಕು.
ಮೊದಲು ಕಿರಿಕ್ ಶುರುವಾಗಿದ್ದು ಫ‍್ಯಾಕ್ಟರಿ ಸೀನ್ ಒಂದರ ಶೂಟಿಂಗ್ ವೇಳೆ. ಆವತ್ತು ಕೊನೆ ಕ್ಷಣದಲ್ಲಿ 8 ಸಾಲಿನ ಡೈಲಾಗ್ ಸೇರಿಸಿದಾಗ ಈಗ ಕೊಡ್ತಾ ಇದ್ದೀರಾ, ನಾನು ಮಾಡಲ್ಲ ಎಂದು ದೊಡ್ಡ ಗಲಾಟೆ ಮಾಡಿದ್ರು. ಸುಮಾರು ಒಂದು ಗಂಟೆ ಆದ ಮೇಲೆ ಅವರೇ ಬಂದು ಆಯ್ತು, ಮಾಡ್ತೀನಿ ಅಂತ ಬಂದ್ರು ಶೂಟಿಂಗ್ ಆಯ್ತು.
ಆರಂಭದಲ್ಲಿ ನಮ್ಮ ಒಡವೆ, ಹಣ ಎಲ್ಲಾ ಹಾಕಿ ಈ ಶೂಟಿಂಗ್ ಮಾಡಿದ್ವಿ. ಅದಕ್ಕೇ ಅಷ್ಟು ಅದ್ಧೂರಿಯಾಗಿ ಬಂತು. ಶೂಟಿಂಗ್ ಸೆಟ್ ನಲ್ಲಿ ಸಣ್ಣ ವಿಚಾರಕ್ಕೂ ಕೂಗಾಡೋದು, ಇದರಿಂದ ಕೆಲವರು ಕೆಲಸ ಬಿಟ್ಟು ಹೋಗೋದು, ಇನ್ನು ಕೆಲವರನ್ನು ಇವರಿಗೋಸ್ಕರ ನಾವೇ ತೆಗೆದುಹಾಕಿದ್ದೂ ಇದೆ. ಶೂಟಿಂಗ್ ಸೆಟ್ ಗೆ ಬಂದರೆ ತಿಂಡಿ ತಿನ್ತೀನಿ, ಊಟ ಮಾಡ್ತೀನಿ ಎಂದು ಕತೆ ಕಟ್ಟೋದು. ಅವರ ಎದುರು ಬೇರೆ ಕಲಾವಿದರಿಗೂ ಏನೂ ಹೇಳುವ ಹಾಗಿಲ್ಲ. ಇದು ದಿನನಿತ್ಯ ನಡೆದುಕೊಂಡು ಬಂದಿದೆ. ಸೆಟ್ ನಲ್ಲಿ ತಂತ್ರಜ್ಞರು ಗಾಸಿಪ್ ಮಾಡ್ತಿದ್ದಾರೆ ಎಂದು ನಾಲ್ಕೈದು ದಿನ ಶೂಟಿಂಗ್ ಗೇ ಬಂದಿಲ್ಲ. ಕೊನೆಗೆ ನಾನೇ ಅವರ ಮನೆಗೆ ಹೋಗಿ ಸಮಾಧಾನ ಮಾಡಿ ಕರೆದುಕೊಂಡು ಬಂದೆ.
ಕೊರೋನಾ ಸಮಯದಲ್ಲಿ ಎಲ್ಲಾ ಕಲಾವಿದರಿಗೆ ಶೇ.15 ರಷ್ಟು ಸಂಭಾವನೆ ಕಡಿತಮಾಡಲಾಗಿತ್ತು. ಗಟ್ಟಿಮೇಳ-ಜೊತೆ ಜೊತೆಯಲಿ ಮಹಾಸಂಗಮ ಶೂಟಿಂಗ್ ಸಮಯದಲ್ಲಿ ಈ ವಿಚಾರಕ್ಕೆ ಹೊರಗೆ ಬಂದು ದೊಡ್ಡದಾಗಿ ಗಲಾಟೆ ಮಾಡಿದ್ರು. ಎಲ್ಲರೂ ಸಂಕಷ್ಟದಲ್ಲಿರುವಾಗಲೂ ಅವರದ್ದು 5 ರೂ. ಸಂಭಾವನೆ ಕಡಿಮೆ ಮಾಡಲಿಲ್ಲ. ಇಷ್ಟೆಲ್ಲಾ ಆದರೂ ನಮಗೆ ಸೀರಿಯಲ್ ನಡೆಯಬೇಕಿತ್ತು. ಶೂಟಿಂಗ್ ನಿಂತು ಹೋದ್ರೆ ಇಡೀ ಫ್ಯಾಮಿಲಿ ಮುಳುಗಿ ಹೋಗ್ತಿತ್ತು. ಔಟ್ ಡೋರ್ ಶೂಟಿಂಗ್ ವೇಳೆಯೂ ಸಮಯ ಹಾಳು ಮಾಡಿದ್ರು. ಎಲ್ಲರೂ ಸೆಟ್ ನಲ್ಲಿ ಊಟ ಮಾಡಿದ್ರೆ ಇವರಿಗೆ ಸ್ಟಾರ್ ಹೋಟೆಲ್ ಊಟ ಬೇಕಿತ್ತು. ಆ ವೇಳೆ ಸಹಕಲಾವಿದರನ್ನೂ ಕರೆದುಕೊಂಡು ಹೋಗ್ತಿದ್ದರು. ಹೀರೋಯಿನ್ ಮನಸ್ಥಿತಿಯೂ ಇವರಿಂದಲೇ ಬದಲಾಯಿತು ಎಂದು ನಮಗೆ ಅರ್ಥವಾಯಿತು.
ಈ ಮೊದಲು ಫ್ಲ್ಯಾಶ್ ಬ್ಯಾಕ್ ಸೀನ್ ಮಾಡುವಾಗ ಜೈ ಜಗದೀಶ್ ರಂತಹ ಹಿರಿಯ ಕಲಾವಿದರು ಬಂದಿದ್ದರು. ಎಲ್ಲರೂ ಅಲ್ಲಲ್ಲೇ ಬಟ್ಟೆ ಚೇಂಜ್ ಮಾಡ್ತಿದ್ರು. ಆದರೆ ಇವರು ಮಾತ್ರ ಕ್ಯಾರಾವ್ಯಾನ್ ಇಲ್ಲ ಎಂದು ಗಲಾಟೆ ಮಾಡಿದ್ರು. ಆಗ ಜೈ ಜಗದೀಶ್ ಅವರು ಬುದ್ಧಿ ಹೇಳಿದ್ರು. ಸ್ಟಾರ್ ವ್ಯಾಲ್ಯೂ ಹೆಚ್ಚು ಆದ ಮೇಲೆ ಎಲ್ಲದರಲ್ಲೂ ಹಿಡಿತ ಸಾಧಿಸಲು ಶುರು ಮಾಡಿದ್ರು. ಈ ಥರಾ ಸೀರಿಯಲ್ ಮಾಡ್ಕೊಂಡು ನಾವು ಹೆಂಗೆ ಬದುಕಬೇಕು.
ಅವರು ನಾವು ಮಾತನಾಡಿಸುವ ಅನಿರುದ್ಧೇ ಬೇರೆ ಅವರು ವೈಯಕ್ತಿಕವಾಗಿ ಇರೋದೇ ಬೇರೆ. ಇದನ್ನು ನಾನು ಕಂಡುಕೊಂಡ ಸತ್ಯ. ಹಾಗಾಗಿ ಇಷ್ಟೆಲ್ಲಾ ಆದ ಮೇಲೆ ನಾವು, ಚಾನೆಲ್ ನವರು ಕೂತುಕೊಂಡು ನಿರ್ಧಾರ ಮಾಡಿದ್ದೇನೆಂದರೆ ಇನ್ನು ಮುಂದೆ ಅವರನ್ನು ಈ ಧಾರವಾಹಿಯಲ್ಲಿ ಮುಂದುವರಿಸಿಕೊಂಡು ಹೋಗುವುದು ಬೇಡ.