ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರವ ಸರ್ಜಾ ಅಭಿನಯದ ಇದೇ ಶುಕ್ರವಾರ ಬಿಡುಗಡೆಯಾಗಿದ್ದ ಪೊಗರು ಸಿನಿಮಾದಲ್ಲಿನ ದೃಶ್ಯವೊಂದರ ಬಗ್ಗೆ ಬ್ರಾಹ್ಮಣರ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ.
ಈ ಚಿತ್ರದ ದೃಶ್ಯವೊಂದರಲ್ಲಿ ವಿಲನ್ ಪಾತ್ರಧಾರಿ ಹೋಮ ಮಾಡುತ್ತಿದ್ದ ಬ್ರಾಹ್ಮಣ ಹೆಗಲ ಮೇಲೆ ಕಾಲಿಟ್ಟು ತುಳಿಯುವ ದೃಶ್ಯವಿದೆ. ಇದು ಬ್ರಾಹ್ಮಣರಿಗೆ ಮಾಡಿದ ಅವಮಾನ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ‍್ಯಕ್ಷ ಸಚ್ಚಿದಾನಂದ ಮೂರ್ತಿ ಆಕ್ಷೇಪಿಸಿದ್ದಾರೆ. ಅಲ್ಲದೆ, ಚಿತ್ರತಂಡ ಬ್ರಾಹ್ಮಣರ ಕ್ಷಮೆ ಕೇಳಬೇಕು, ಇಲ್ಲದೇ ಹೋದರೆ ವಾಣಿಜ್ಯ ಮಂಡಳಿಗೆ ದೂರು ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ನಂದಕಿಶೋರ್, ನಮಗೆ ಯಾವ ಸಮುದಾಯವನ್ನೂ ಅವಮಾನಿಸುವ ಉದ್ದೇಶವಿಲ್ಲ. ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ಕ್ಷಮೆಯಿರಲಿ. ಈ ದೃಶ್ಯವನ್ನು ಎಡಿಟ್ ಮಾಡಿ ಯಾರಿಗೂ ನೋವಾಗದಂತೆ ತಿದ್ದುಪಡಿ ಮಾಡಲಾಗುವುದು. ಹಿಂದಿನ ಕಾಲದಲ್ಲಿ ರಾಕ್ಷಸರು ಹೋಮ ಹವನಕ್ಕೆ ತೊಂದರೆ ಕೊಡುತ್ತಿದ್ದರು. ಅದೇ ಪರಿಕಲ್ಪನೆ ಇಟ್ಟುಕೊಂಡು ಈ ದೃಶ್ಯ ಮಾಡಿದ್ದೆವು. ಆದರೆ ಇದರಿಂದ ನೋವಾಗುತ್ತದೆ ಎಂದರೆ ಅದನ್ನು ತೆಗೆಯುತ್ತೇವೆ ಎಂದಿದ್ದಾರೆ.