ಬೆಂಗಳೂರು: ಹಿಂದಿ ಹೇರಿಕೆ ವಿರುದ್ಧ ಧ್ವನಿಯೆತ್ತಿರುವ ಸೆಲೆಬ್ರಿಟಿಗಳ ಸಾಲಿಗೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಸೇರಿಕೊಂಡಿದ್ದಾರೆ.
ಹಿಂದಿ ಹೇರಿಕೆ ವಿರೋಧಿಸಿ ಟ್ವೀಟ್ ಮಾಡಿರುವ ದರ್ಶನ್ ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಿಸುವುದು ಬೇಕಾಗಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ‘ಬಹಳ ವರ್ಷಗಳಿಂದಲೂ ಹಿಂದಿ ಹೇರಿಕೆ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಯ ಹಾವಳಿಯಿಂದ ಕನ್ನಡ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದನ್ನು ಪ್ರತಿಭಟಿಸದೇ ಇದ್ದರೆ ಮುಂದೊಂದು ದಿನ ಕನ್ನಡಿಗರಿಗೆ ಅಸ್ತಿತ್ವವೇ ಇಲ್ಲವಾದೀತು. ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಿಸುವುದು ಬೇಕಾಗಿಲ್ಲ. ಅದು ಕೇವಲ ಉತ್ತರ ಭಾರತದ ರಾಜ್ಯಗಳಿಗೆ ಸೀಮಿತವಾಗಿರಲಿ. ಯಾವುದೋ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯ. ನಮ್ಮ ಕೊನೆಯುಸಿರುವವರೆಗೂ ಕನ್ನಡ ಪರವಾಗಿ ನಿಲ್ಲುತ್ತೇವೆ. ಕನ್ನಡವೇ ಸತ್ಯ, ನಿತ್ಯ’ ಎಂದು ಡಿ ಬಾಸ್ ಟ್ವೀಟ್ ಮಾಡಿದ್ದಾರೆ.