ಬೆಂಗಳೂರು: ಒಂದು ಕಾಲವಿತ್ತು. ಸಿನಿಮಾ ಎಂದರೆ ಬಾಲಿವುಡ್ ಎನ್ನುವ ಮಟ್ಟಿಗೆ ಹಿಂದಿ ಚಿತ್ರರಂಗದ ಪ್ರಭಾವವಿತ್ತು. ಆದರೆ ಈಗ ಬಾಲಿವುಡ್ ಸೌತ್ ಸಿನಿಮಾಗಳತ್ತ ನೋಡುವ ರೀತಿ ನಮ್ಮ ಚಿತ್ರರಂಗ ಬೆಳೆದಿದೆ.
ಅದರಲ್ಲೂ ಕೆಜಿಎಫ್ ಸಿನಿಮಾ ಬಳಿಕ ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತಾರವಾಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆಯವರೂ ತಿರುಗಿ ನೋಡುವಂತೆ ಆಗಿದೆ ಎಂದರೆ ತಪ್ಪಾಗಲಾರದು. ಮೊದಲೆಲ್ಲಾ ಹಿಂದಿ ಸಿನಿಮಾಗಳ ಎದುರು ಸ್ಯಾಂಡಲ್ ವುಡ್ ಸಿನಿಮಾಗಳು ಎದ್ದು ನಿಲ್ಲುವುದೂ ಕನಸಿನ ಮಾತಾಗಿತ್ತು. ಆದರೆ ಈಗ ಅದೇ ಬಾಲಿವುಡ್ ಮಂದಿ ಕನ್ನಡ ಸಿನಿಮಾದ ರಿಲೀಸ್ ಡೇಟ್ ನೋಡಿಕೊಂಡು ತಮ್ಮ ಸಿನಿಮಾ ರಿಲೀಸ್ ಮಾಡುವ ಹಂತಕ್ಕೆ ಬಂದಿದೆ.
ಕೆಜಿಎಫ್ 2 ಸಿನಿಮಾ ಬಾಲಿವುಡ್ ನ ಅಮೀರ್ ಖಾನ್ ರಲ್ಲಿ ಭಯ ಹುಟ್ಟಿಸಿದ್ದರೆ, ಕನ್ನಡದ ಮದಗಜ ಸಿನಿಮಾ ಹಿಂದಿಗೆ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಮೊನ್ನೆ ಬಿಡುಗಡೆಯಾದ ಗರುಡಗಮನ ವೃಷಭ ವಾಹನ ಎನ್ನುವ ಹೊಸ ಪ್ರಯೋಗದ ಸಿನಿಮಾವೊಂದು ಬಾಲಿವುಡ್ ಮಂದಿಯ ಗಮನ ಸೆಳೆದಿದೆ. ಲಾಕ್ ಡೌನ್, ಕೊರೋನಾ, ಡ್ರಗ್ ಪ್ರಕರಣಗಳಿಂದ ಬಾಲಿವುಡ್ ನಲುಗಿ ಹೋಗಿದ್ದರೆ, ಇತ್ತ ದಕ್ಷಿಣ ಭಾರತೀಯ ಸಿನಿಮಾ ರಂಗ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ.