ಮಂಗಳೂರು : ಡ್ರಗ್ ಕೇಸ್ನಿಂದ ಅನುಶ್ರೀಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ವರ್ಷ ರಾಜ್ಯಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ್ದ ಡ್ರಗ್ ಕೇಸ್ನಲ್ಲಿ ನಟ-ನಟಿಯರು, ನಿರೂಪಕರು, ನಿರ್ಮಾಪಕ-ನಿರ್ದೇಶಕರು. ಹೀಗೆ ಸಿನಿರಂಗವನ್ನೇ ಡ್ರಗ್ಸ್ ಮಾಫಿಯಾ ಸುತ್ತಿಕೊಂಡಂತೆ ಭಾಸವಾಗಿತ್ತು. ಈ ಕೇಸ್ನಲ್ಲಿ ಅನುಶ್ರೀ ಹೆಸರೂ ಕೇಳಿಬಂದಿತ್ತು.
ಖ್ಯಾತ ನಿರೂಪಕಿ-ನಟಿ ಅನುಶ್ರೀ ಅವರಿಗೂ ಸಿಸಿಬಿ ಪೊಲೀಸರು 2020ರ ಸೆಪ್ಟೆಂಬರ್ 25ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಡಾನ್ಸರ್ ಕಿಶೋರ್ ಶೆಟ್ಟಿಯ ಪಾರ್ಟಿಗಳಲ್ಲಿ ಅನುಶ್ರೀ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಮಂಗಳೂರಿನ ಸಿಸಿಬಿ ಕಚೇರಿಯಲ್ಲಿ ವಿಚಾರಣೆಯನ್ನೂ ಎದುರಿಸಿದ್ದರು.
ಇದೀಗ ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಆರೋಪಿ ಸ್ಥಾನದಲ್ಲಿ ಅನುಶ್ರೀ ಹೆಸರಿಲ್ಲ. ಆರೋಪಿಗಳ ಪಟ್ಟಿಯಿಂದ ಅನುಶ್ರೀ ಹೆಸರನ್ನು ಸಿಸಿಬಿ ಪೊಲೀಸರು ಕೈಬಿಟ್ಟಿದ್ದಾರೆ ಎಂದು 'ದಿಗ್ವಿಜಯ ನ್ಯೂಸ್'ಗೆ ಸಿಸಿಬಿ ಉನ್ನತ ಮೂಲಗಳು ತಿಳಿಸಿವೆ. ಕಿಶೋರ್ ಅಮನ್ ಶೆಟ್ಟಿ, ತರುಣ್ ಸೇರಿದಂತೆ ನಾಲ್ವರನ್ನು ಆರೋಪಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಿಶೋರ್ ಶೆಟ್ಟಿ ಹೇಳಿಕೆಯಲ್ಲಿ ಅನುಶ್ರೀ ಹೆಸರು ಉಲ್ಲೇಖವಿದೆ. ಆದರೆ, ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. 2007ರಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದೆವು ಎಂಬ ಕಿಶೋರ್ ಹೇಳಿಕೆಗೆ ಯಾವುದೇ ಪೂರಕ ಸಾಕ್ಷಿ ಸಿಕ್ಕಿಲ್ಲ. ಆರೋಪಿಗಳ ಹಾಗೂ ಅನುಶ್ರೀ ನಡುವೆ ಯಾವುದೇ ಫೋನ್ ಕರೆ ಸಂಭಾಷಣೆ ನಡೆದಿಲ್ಲ. ಯಾವುದೇ ಸಾಕ್ಷಿ ಸಿಗದೆ ಇರುವುದರಿಂದ ಅನುಶ್ರೀ ಹೆಸರನ್ನು ಆರೋಪಿಗಳ ಪಟ್ಟಿಯಿಂದ ಕೈಬಿಡಲಾಗಿದೆ.