ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ 9 ನೇ ಎಸಿಎಂಎಂ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದ್ದು, ಈ ವಿವಾದದ ಬಗ್ಗೆ ರಕ್ಷಿತ್ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಹಾಡೊಂದನ್ನು ಬಳಸಲಾಗಿದೆ ಎಂದು ಲಹರಿ ಸಂಸ್ಥೆ ನೀಡಿದ್ದ ದೂರಿನನ್ವಯ ಕೃತಿ ಚೌರ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮತ್ತು ಅವರ ಪರಂವಾ ಸ್ಟುಡಿಯೋ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ.
ಆದರೆ ಈ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ರಕ್ಷಿತ್ ಈ ಪ್ರಕರಣ ಕಿರಿಕ್ ಪಾರ್ಟಿ ಬಿಡುಗಡೆ ಸಂದರ್ಭದಲ್ಲೇ ಕೇಸು ದಾಖಲಾಗಿ ಅದನ್ನು ನಾವು ಸಿವಿಲ್ ಮತ್ತು ಹೈ ಕೋರ್ಟ್ ಮೂಲಕ ಜಯವನ್ನೂ ಪಡೆದಿದ್ದೆವು. ಅದರ ಸಂಬಂಧ ಮತ್ತೆ ಈಗ ದೂರು ನೀಡುವ ಅಗತ್ಯವೇನಿತ್ತು. ವಿಶೇಷವೆಂದರೆ ಈ ದೂರನ್ನು ಆರು ತಿಂಗಳ ಹಿಂದೆ ದಾಖಲಿಸಲಾಗಿದೆ. ಆದರೆ ನಮಗೆ ಅಥವಾ ನಮ್ಮ ಲಾಯರ್ ಗೆ ಈ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಯಾಕೆ?
ಅಂದು ಕಿರಿಕ್ ಪಾರ್ಟಿ ರಿಲೀಸ್ ಆಗುವ ಹಿಂದಿನ ದಿನ ಈ ಪ್ರಕರಣ ದಾಖಲಾಗಿತ್ತು. ಆಗ ನಾವು ನಮ್ಮ ಹಾಡನ್ನು ಮರಳಿ ಪಡೆಯಲು ಕೋರ್ಟ್ ನಲ್ಲಿ ಹೋರಾಡಬೇಕಾಗಿತ್ತು. ಅದೃಷ್ಟವಶಾತ್ ಕೋರ್ಟ್ ನಲ್ಲಿ ಜಯಗಳಿಸಿ ಎರಡನೇ ವಾರದಿಂದ ಈ ಹಾಡನ್ನು ಸಿನಿಮಾದಲ್ಲಿ ಸೇರ್ಪಡೆ ಮಾಡಿದ್ದೆವು. ಒಂದು ವರ್ಷದ ಬಳಿಕ ನಾವು ಕೋರ್ಟ್ ಕೇಸ್ ನಲ್ಲಿ ಜಯಗಳಿಸಿದ್ದೆವು. ಇದೆಲ್ಲವೂ ನಮಗೆ ಹೊಸ ಅನುಭವವಾಗಿತ್ತು. ಇದೆಲ್ಲಾ ಯಾಕಾಗಿ ಎಂದು ಗೊತ್ತಾಗುತ್ತಿಲ್ಲ ಎಂದು ರಕ್ಷಿತ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.