ಬೆಂಗಳೂರು: ರಾಜಧಾನಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಕುವುದು ಮತ್ತು ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ ಉದ್ಯಾನ ನಗರಿಯನ್ನು ಕಸದ ಗೂಡಾಗಿ ಮಾಡುತ್ತಿರುವುದರ ವಿರುದ್ಧ ನಟ ಅನಿರುದ್ಧ್ ಧ‍್ವನಿಯೆತ್ತಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಾಜಧಾನಿಯ ಕೆಲವೆಡೆ ಕಸ ಬಿಸಾಕಿರುವ ಫೋಟೋ ಪ್ರಕಟಿಸಿರುವ ಅನಿರುದ್ಧ್ ಇದು ನಾಡಿನ ರಾಜಧಾನಿಯಾದ ಬೆಂಗಳೂರಿನ ಛಾಯಾಚಿತ್ರಗಳು. ರಸ್ತೆ ತುಂಬಾ ಕಸ, ಬೇಕಾದಷ್ಟು ಕಸದ ತೊಟ್ಟಿಗಳು ಇಲ್ಲದೇ ಇರೋದು, ಅಸ್ವಚ್ಛ, ಗುಂಡಿಗಳಿರೋ ರಸ್ತೆಗಳು, ಅವೈಜ್ಞಾನಿಕ ದಿಣ್ಣೆಗಳು, ಬೇಕಾದಷ್ಟು ಗಿಡಗಳು ನೆಡದೇ ಇರೋದು, ವಿದ್ಯುತ್ ಮತ್ತಿತರ ತಂತಿಗಳು ಜೋತು ಬಿದ್ದಿರೋದು.. ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ನಾಯಕರೇ, ನಾಗರಿಕರೇ, ಚುನಾವಣೆ ಮುಗಿದ ಮೇಲೆ ನಮ್ಮ ಜವಾಬ್ಧಾರಿ ಮುಗಿಯಲ್ಲ. ಪ್ರಾರಂಭ ಆಗುತ್ತೆ. ದಯವಿಟ್ಟು ಕ್ರಮ ತೆಗೆದುಕೊಳ್ಳಿ.ಇದು ತಮ್ಮಲ್ಲಿ ಮನಃಪೂರ್ವಕವಾಗಿ ಮನವಿ, ನಿಮ್ಮ ಕೈಲಾದಷ್ಟು ಪ್ರಯತ್ನ ಪಡಿ. ನಮ್ಮ ಊರು, ಬಡಾವಣೆ, ಸ್ವಚ್ಛ ಸುಂದರ ಮಾಡೋಣ ಎಂದು ಮನವಿ ಮಾಡಿದ್ದಾರೆ.
ತಮ್ಮ ಧಾರವಾಹಿ ಮೂಲಕ ಸ್ವಚ್ಛತೆ, ಸಾಮಾಜಿಕ ಕಳಕಳಿಯ ಸಂದೇಶ ನೀಡುತ್ತಿರುವ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಈಗ ನಿಜ ಜೀವನದಲ್ಲೂ ಸಾಮಾಜಿಕ ಕಳಕಳಿಯ ಬಗ್ಗೆ ಧ್ವನಿಯೆತ್ತಿರುವುದಕ್ಕೆ ಅಭಿಮಾನಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.