ನೀರಿನ ಸಮಸ್ಯೆ ಎಂಬುದು ಇಂದು ಅಂತಾರಾಷ್ಟೀಯ ಮಟ್ಟದಲ್ಲಿಯೂ ವ್ಯಾಪಿಸಿಕೊಂಡಿದೆ. ಈ ಬಗ್ಗೆ ಜಾಗೃತಿ ಮೂಡಿಸೋ ಉದ್ದೇಶದಿಂದಲೇ ಮಾರ್ಚ್ 22ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವಿಶ್ವ ಜಲದಿನದ ದಿನಾಂಕವನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಖ್ಯಾತ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ
`ಮಾರ್ಚ್ 22’.
ಈ ಶೀರ್ಷಿಕೆ ನೋಡಿದರೇನೇ ಜಲದ ಬಗ್ಗೆ ಕೇಂದ್ರೀಕರಿಸಿದ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂದು ಗೊತ್ತಾಗುತ್ತದೆಯಾದರೂ ಈ ಸಂಕೀರ್ಣ ಸಮಸ್ಯೆಯ ವಿವಿಧ ಆಯಾಮಗಳನ್ನು ರೋಚಕತೆಯೊಂದಿಗೆ ಚಿತ್ರವಾಗಿಸಲು ಕೋಡ್ಲು ರಾಮಕೃಷ್ಣ ಮುಂದಾಗಿದ್ದಾರೆ. ಈ ಚಿತ್ರದ ಚಿತ್ರೀಕರಣವೀಗ ಬೈಲಹೊಂಗಲದ ವಾಡೆ ಸೇರಿದಂತೆ ವಿಶೇಷ ಸ್ಥಳಗಳಲ್ಲಿ ಮುಂದುವರೆಯುತ್ತಿದೆ.
ಅನಂತ ನಾಗ್ ಮತ್ತು ಲಕ್ಷ್ಮಿ ಬಹಳ ವರ್ಷಗಳ ನಂತರ ಅವರೂ ಮುಖ್ಯ ಪಾತ್ರವೊಂದರಲ್ಲಿ ನಟಿಸಿರುವ ಈ ಚಿತ್ರದ ಕಥೆ ರಾಮಕೃಷ್ಣ ಅವರಿಗೆ ಹೊಳೆದದ್ದು ಹದಿನೈದು ವರ್ಷಗಳ ಹಿಂದೆ. ಆ ದಿನಗಲ್ಲಿಯೇ ಸಂಪೂರ್ಣ ತಯಾರಿ ಮಾಡಿಕೊಂಡಿದ್ದರಾದರೂ ಕಾಸು ಹೂಡಿ ಈ ಚಿತ್ರ ಮಾಡಲು ಯಾರೂ ಮುಂದೆ ಬಂದಿರಲಿಲ್ಲವಂತೆ. ಈ ಕಥೆಯನ್ನು ಬಚ್ಚಿಟ್ಟುಕೊಂಡೇ ಏಳೆಂಟು ಚಿತ್ರ ಮಾಡಿ ಮುಗಿಸಿದರೂ ಕೂಡಾ ಸದರಿ ಚಿತ್ರಕ್ಕೊಬ್ಬರು ನಿರ್ಮಾಪಕರು ಸಿಕ್ಕಿರಲಿಲ್ಲ.
ಈ ಚಿತ್ರ ಹೊರ ಬರಲು ಸಂಪರ್ಕವೊಂದು ಸಿಕ್ಕಂತಾಗಿದ್ದು ಕೋಡ್ಲು ರಾಮಕೃಷ್ಣ ಅವರು ಮಿ ಡೂಪ್ಲಿಕೇಟ್ ಚಿತ್ರ ಮಾಡುವಾಗ. ಆ ಚಿತ್ರಕ್ಕಾಗಿ ದುಬೈ ಉದ್ಯಮಿ ಹರೀಶ್ ಶೇರಿಗಾರ್ ಅವರ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಈ ವಿಚಾರವಾಗಿಯೇ ಕೋಡ್ಲು ರಾಮಕೃಷ್ಣರಿಗೆ ಹರೀಶ್ ಪರಿಚಯವಾಗಿತ್ತು. ಸಾಹಿತ್ಯ, ಚಿತ್ರರಂಗ ಮತ್ತು ಸಂಗೀತದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಹರೀಶ್ ಅವರಲ್ಲಿ ರಾಮಕೃಷ್ಣ ಈ ಕಥೆಯ ಬಗ್ಗೆ ಹೇಳಿದ್ದರಂತೆ.
ಕಥೆ ಕೇಳುತ್ತಿದ್ದಂತೆಯೇ ಹರೀಶ್ ಖುಷಿಯಿಂದ ಹಣ ಹೂಡಲು ಮುಂದೆ ಬಂದ ಪರಿಣಾಮವಾಗಿಯೇ ಚಿತ್ರ ಅಣಿಗೊಳ್ಳುತ್ತಿದೆ. ತಂದೆ ಮಾಡಿಕೊಟ್ಟ ಪುಟ್ಟ ಉದ್ಯಮವನ್ನೇ ದೊಡ್ಡ ಮಟ್ಟದಲ್ಲಿ ಮುನ್ನಡೆಸುತ್ತಿರುವ ಹರೀಶ್ ಶೇರಿಗಾರ್ ದುಬೈನಲ್ಲಿದ್ದರೂ ಹುಟ್ಟಿದ ಮಣ್ಣಿನ ನಂಟನ್ನು ಮರೆಯದವರು. ಅವರಿಂದಾಗಿಯೇ ಈ ಚಿತ್ರ ಹೊರ ಬರುವಂತಾಗಿದೆ ಎಂಬುದು ಕೋಡ್ಲು ರಾಮಕೃಷ್ಣರ ಮಾತು.
ಇನ್ನು ಈ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಅನಂತ್ ನಾಗ್ ಕೂಡಾ ಈ ಚಿತ್ರದ ಕಥೆಯ ಬಗ್ಗೆ ಥ್ರಿಲ್ ಆಗಿದ್ದಾರೆ. ನೀರಿಗೆಂದೇ ಯುದ್ಧ ನಡೆಯುವ ಸಂಭವಗಳೂ ಇರುವ ಈ ಕಾಲದಲ್ಲಿ ಕೋಡ್ಲು ಕೈಗೆತ್ತಿಕೊಂಡಿರುವ ಈ ಚಿತ್ರ ಹಲವು ದಿಕ್ಕುಗಳ ಚರ್ಚೆಗೆ ಕಾರಣವಾಗಲಿ ಎಂಬ ಆಶಯ ಅವರದ್ದು. ವಿನಯಾ ಪ್ರಸಾದ್ ಅವರೂ ಅಭಿನಯಿಸಿರುವ ಈ ಚಿತ್ರಕ್ಕೆ ಮಣಿಕಾಂತ್ ಖದ್ರಿ ಮತ್ತು ರವಿಶೇಖರ್ ಇಬ್ಬರೂ ಸಂಗೀತ, ಕರ್ವ ಖ್ಯಾತಿಯ ಮೋಹನ್ ಛಾಯಾಗ್ರಹಣವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.