ತಿರುವನಂತಪುರಂ: ಒಂದು ವಯಸ್ಸು ದಾಟಿದ ಮೇಲೆ ಶಾಲೆ, ಓದು ಎಂದರೆ ಇಷ್ಟವಾಗಲ್ಲ. ಆದರೆ ಮಲಯಾಳಂನ ಈ ಸ್ಟಾರ್ ನಟ ಇಂದ್ರನ್ಸ್ ತಮ್ಮ 68 ನೇ ವಯಸ್ಸಿನಲ್ಲಿ 7 ನೇ ಕ್ಲಾಸ್ ಪರೀಕ್ಷೆ ಪಾಸ್ ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.
ಮಲಯಾಳಂ ಸಿನಿಮಾದಲ್ಲಿ ನೂರಾರು ಸಿನಿಮಾಗಳನ್ನು ಮಾಡಿರುವ ಖ್ಯಾತ ಪೋಷಕ ನಟ ಇಂದ್ರನ್ಸ್. ಕಾಸ್ಟ್ಯಾಮ್ ಡಿಸೈನರ್ ಆಗಿದ್ದ ಇಂದ್ರನ್ಸ್ ಬಳಿಕ ನಟನಾಗಿ ತಮ್ಮದೇ ಛಾಪು ಮೂಡಿಸಿದವರು. ಕೇರಳ ಸರ್ಕಾರದ ಸಾಕ್ಷರತಾ ಯೋಜನೆಯ ಭಾಗವಾಗಿ 7 ನೇ ತರಗತಿಯ ಪರೀಕ್ಷೆಗೆ ಕಳೆದ ವರ್ಷ ನೋಂದಣಿ ಮಾಡಿಕೊಂಡಿದ್ದರು.
ಈ ಹಿಂದೆ ಇಂದ್ರನ್ಸ್ ನಾಲ್ಕನೇ ತರಗತಿವರೆಗೆ ಓದಿದ್ದರು. ಆದರೆ ಈಗ ಅವರಿಗೆ ಎಷ್ಟನೇ ತರಗತಿವರೆಗೆ ಓದಿದ್ದೆ ಎನ್ನುವುದು ಖಚಿತವಾಗಿ ನೆನಪಿರಲಿಲ್ಲ. ಕೊನೆಗೆ ಅಧಿಕಾರಿಗಳೇ ಅವರು ನಾಲ್ಕನೇ ತರಗತಿವರೆಗೆ ಓದಿದ್ದು ಎನ್ನುವುದು ಖಚಿತವಾಗಿತ್ತು. 7 ನೇ ತರಗತಿ ಪರೀಕ್ಷೆಗೆ ಕಟ್ಟಿದ ಬಳಿಕ ಇಂದ್ರನ್ ಶೂಟಿಂಗ್ ನಡುವೆಯೂ ಪುಸ್ತಕ ಹಿಡಿದು ಓದುತ್ತಿದ್ದರಂತೆ. ಇದಕ್ಕೆ ಅವರಿಗೆ ಸಾಕ್ಷರತಾ ಪ್ರೇರಕ ವಿಜಯಲಕ್ಷ್ಮಿ ಓದಿಗೆ ಸಹಾಯ ಮಾಡಿದ್ದರಂತೆ. ಅವರು ಹೇಳುವ ಪ್ರಕಾರ ನಟ ಇಂದ್ರನ್ಸ್ ಗೆ ಹಿಂದಿ ಭಾಷೆ ಕಬ್ಬಿಣದ ಕಡಲೆಯಾಗಿತ್ತಂತೆ.
ಆದರೆ ಅವರಿಗೆ ಹಿಂದಿ ಓದಲು ಮೊಮ್ಮಗಳೇ ಸಹಾಯ ಮಾಡಿದ್ದಳಂತೆ. ಮಲಯಾಳಂ ಸೇರಿದಂತೆ ಇತರೆ ವಿಷಯಗಳಲ್ಲಿ ಅವರು ಚುರುಕಾಗಿದ್ದರು. ಇದೀಗ ತಮ್ಮ 68 ನೇ ವಯಸ್ಸಿನಲ್ಲಿ 500 ಕ್ಕೆ 297 ಅಂಕ ಪಡೆದು ಏಳನೇ ಕ್ಲಾಸ್ ಪಾಸ್ ಮಾಡಿಕೊಂಡಿದ್ದಾರೆ.