ಬೆಂಗಳೂರು: ಸಾಮಾಜಿಕ ಕಳಕಳಿಯ ಕೆಲಸಗಳ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿರುವ ನಟ ಅನಿರುದ್ಧ್ ಜತ್ಕಾರ್ ಇದೀಗ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ರೋಗಿಗಳ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆಗೊಳಗಾಗುವ ರೋಗಿಗಳ ವೈದ್ಯಕೀಯ ವೆಚ್ಚದ ಹೊರೆ ತಗ್ಗಿಸಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ ಒದಗಿಸಬೇಕು ಎಂದು ವಿಡಿಯೋ ಮುಖಾಂತರ ನಟ ಅನಿರುದ್ಧ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗೊಳಗಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ರೋಗಿಗಳು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಲೇಬೇಕಾದ ಪರಿಸ್ಥಿತಿಯಿದೆ. ಇದಕ್ಕಾಗುತ್ತಿರುವ ಖರ್ಚು ದುಬಾರಿ. ಇದರಿಂದಾಗಿ ರೋಗಿಗಳು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಉಚಿತ ಚಿಕಿತ್ಸೆಯಿದೆ. ಆದರೆ ಅದಕ್ಕೆ ತಕ್ಕ ಸೌಲಭ್ಯಗಳು ಅಷ್ಟು ಸರಿ ಇಲ್ಲ. ಹೀಗಾಗಿ ನಾನು ಸರ್ಕಾರಕ್ಕೆ ಈ ಮೂಲಕ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಈ ಬಗ್ಗೆ ಗಮನಹರಿಸಿ. ಇನ್ನು, ಖಾಸಗಿ ಆಸ್ಪತ್ರೆಯಲ್ಲೂ ರಿಯಾಯಿತಿ ದರದಲ್ಲಿ ಈ ಚಿಕಿತ್ಸೆ ಲಭ್ಯವಾಗುವಂತೆ ಕಡ್ಡಾಯವಾದ ನಿಯಮ ಜಾರಿಗೆ ತನ್ನಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.