ಮುದ್ದೆ ತಿಂದು ಒಳ್ಳೆ ನಿದ್ದೆ ಮಾಡು ಅನ್ನೋ ಮಾತಿದೆ. ಅದ್ರಲ್ಲೂ ನಾಟಿ ಕೋಳಿ ಸಾರು ಮಾಡಿದಾಗ ರಾಗಿ ಮುದ್ದೆ ಇಲ್ಲಂದ್ರೆ ಊಟದ ರುಚಿ ಗೊತ್ತಾಗೋದೆ ಇಲ್ಲ. ಇಂತ ರಾಗಿ ಮುದ್ದೆಯನ್ನೇ ಆಧಾರವಾಗಿಟ್ಟುಕೊಂಡು ಸೂನಗಹಳ್ಳಿ ರಾಜು 'ಆನೆ ಬಲ' ಎಂಬ ಸಿನಿಮಾವನ್ನು ಸಿದ್ಧ ಮಾಡಿದ್ದಾರೆ. ಇದೇ 28 ರಂದು ಸಿನಿಮಾ ತೆರೆ ಮೇಲೆ ರಾರಾಜಿಸಲಿದೆ. ಸಿನಿಮಾ ಈಗಾಗಲೇ ಟ್ರೇಲರ್ ನಿಂದಲೇ ಸದ್ದು ಮಾಡಿರುವ 'ಆನೆ ಬಲ'ದಲ್ಲಿ ಮತ್ತಷ್ಟು ವಿಶೇಷತೆಗಳಿವೆ. ಯೋಗರಾಜ್ ಭಟ್ಟರ ಸಾಹಿತ್ಯ ಈ ಸಿನಿಮಾದಲ್ಲಿದೆ.
ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಕ್ರೇಜು. ಅವರ ಹಾಡುಗಳು ಅಂದ್ರೆ ಯುವಕರಿಗೆ ಮತ್ತೇರಿಸುವಂತಿರುತ್ತದೆ. ಈ ಸಿನಿಮಾದಲ್ಲೂ ಯೋಗರಾಜ ಭಟ್ಟರ ಸಾಹಿತ್ಯವಿದ್ದು ಇನ್ನಷ್ಟು ನಿರೀಕ್ಷೆಯನ್ನ ಹುಟ್ಟಿಸಿದೆ. ಜಾನಪದ ಶೈಲಿಗೆ, ಯೋಗರಾಜ ಭಟ್ಟರ ಸಾಹಿತ್ಯ ಬೆರೆತರೆ ಅಲ್ಲೊಂದು ಹುಚ್ಚೆಬ್ಬಿಸುವ ಹಾಡುಗಳು ಕಿವಿಗೆ ಬೀಳದೆ ಇರಲು ಸಾಧ್ಯವೇ ಇಲ್ಲ. ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಪೂರ್ಣಚಂದ್ರ ತೇಜಸ್ವಿಯವರ ಹಾಡುಗಳಿಗೆ ಫಿದಾ ಆಗದವರೇ ಇಲ್ಲ. ಹಳ್ಳಿ ಸೊಗಡಿನ ಕಥೆಗೆ ಅದ್ಭುತವಾದ ಸಾಹಿತ್ಯ ನೀಡಿರುವ ಯೋಗರಾಜ್ ಭಟ್ಟರು ಒಂದು ಕಡೆಯಾದ್ರೆ, ಯುವಕರ ಹೃದಯ ತಟ್ಟುವಂತ, ವಾವ್ ಎನ್ನಿಸುವಂತ ಸಂಗೀತ ನೀಡುವ ಪೂರ್ಣಚಂದ್ರ ತೇಜಸ್ವಿಯವರು ಇನ್ನೊಂದು ಕಡೆ. ಹೀಗಾಗಿ ಒಂದೊಳ್ಳೆ ಹಾಡುಗಳು ಸಿನಿಮಾದಲ್ಲಿ ಮೂಡಿ ಬಂದಿವೆ. ಈಗಾಗಲೇ ರಿಲೀಸ್ ಆಗಿರುವ 'ಮಳವಳ್ಳಿ ಜಾತ್ರೆಲಿ, ರಾಗಿ ಮುದ್ದೆ' ಹಾಡುಗಳು ಹಿಟ್ ಆಗಿವೆ. ಸಿನಿಮಾದಲ್ಲಿ ಜಾನಪದ ಶೈಲಿಯ ಹಾಡುಗಳು ಕಿವಿಗೆ ಇಂಪು ನೀಡುತ್ತವೆ.
ಜನತಾ ಟಾಕೀಸ್ ನ ಚೊಚ್ಚಲ ಕಾಣಿಕೆಯೇ ಈ 'ಆನೆ ಬಲ'. ಎ.ವಿ ವೇಣುಗೋಪಾಲ್ ಅಡಕಿಮಾರನಹಳ್ಳಿ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸೂನಗಹಳ್ಳಿ ರಾಜು ನಿರ್ದೇಶನ ಮಾಡಿದ್ದಾರೆ. ಸಾಗರ್ ನಾಯಕನಾಗಿದ್ದು, ರಕ್ಷಿತಾ ನಾಯಕಿಯಾಗಿದ್ದಾರೆ. ಮಲ್ಲರಾಜು, ಉದಯ್ ಕುಮಾರ್, ಮುತ್ತು ರಾಜ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಇದೆ ತಿಂಗಳ 28 ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.