ಬೆಂಗಳೂರು: ಸ್ಯಾಂಡಲ್ ವುಡ್ ಗೆ 2022 ರ ವರ್ಷ ಸುವರ್ಣ ಕಾಲ ಎಂದರೂ ತಪ್ಪಾಗದು. ಒಟ್ಟು ಐದು ಸಿನಿಮಾಗಳು ಈ ವರ್ಷ 100 ಕೋಟಿ ಗಳಿಕೆ ದಾಖಲೆ ಮಾಡಿವೆ.
ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ಮೊದಲ ದಿನವೇ 30 ಕೋಟಿ ಗೂ ಅಧಿಕ ಗಳಿಕೆ ಮಾಡಿ ಕೊನೆಗೆ 100 ಕೋಟಿ ಕ್ಲಬ್ ಸೇರಿತ್ತು. ಇದಾದ ಬಳಿಕ ಬಿಡುಗಡೆಯಾದ ಕೆಜಿಎಫ್ 2 1000 ಕೋಟಿ ರೂ. ಗಳಿಸಿ ದಾಖಲೆ ಮಾಡಿದೆ.
ರಕ್ಷಿತ್ ಶೆಟ್ಟಿ ಅಭಿನಯಿಸಿದ 777 ಚಾರ್ಲಿ ಸಿನಿಮಾ ಯಾರೂ ನಿರೀಕ್ಷಿಸಿರದ ಪ್ರತಿಕ್ರಿಯೆ ಪಡೆಯಿತು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾದ ಈ ಸಿನಿಮಾ 100 ಕೋಟಿ ಕ್ಲಬ್ ಸೇರಿತು. ಇದರ ನಡುವೆ ಕಿಚ್ಚ ಸುದೀಪ್ ನಾಯಕರಾಗಿರುವ ವಿಕ್ರಾಂತ್ ರೋಣ ಕೂಡಾ 100 ಕೋಟಿ ಗಳಿಕೆ ಮಾಡಿತು.
ಇನ್ನು, ಕಾಂತಾರ ಸಿನಿಮಾ ನಿಜಕ್ಕೂ ಒಂದು ಮೈಲಿಗಲ್ಲು. ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿ ಬಳಿಕ ಬೇಡಿಕೆಯ ಮೇರೆಗೆ ಬಹುಭಾಷೆಗಳಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ಸಿನಿಮಾ ಕಾಂತಾರ 400 ಕೋಟಿ ಗಳಿಕೆ ಮಾಡಿತು.
100 ಕೋಟಿಗಳ ಭರಾಟೆ ನಡುವೆ ಕಾಮಿಡಿ ಕಿಂಗ್ ಶರಣ್ ನಾಯಕರಾಗಿದ್ದ ಗುರು ಶಿಷ್ಯರು ಲಾಭ ಮಾಡಿತು. ಯೋಗರಾಜ್ ಭಟ್-ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಗಾಳಿಪಟ 2 35 ಕೋಟಿ ಬ್ಯುಸಿನೆಸ್ ಮಾಡಿತು. ಇದಲ್ಲದೆ ಹೊಸಬರ ಲವ್ 360 ಸಿನಿಮಾ ಸದ್ದು ಮಾಡಿದೆ. ಇದೀಗ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿರುವ ಶಿವರಾಜ್ ಕುಮಾರ್ ಸಿನಿಮಾ ವೇದ ಭರ್ಜರಿ ಪ್ರದರ್ಶನ ಕಾಣುತ್ತಿದೆ.