ತಮಿಳಿನ ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಮಲ್ ಹಾಸನ್ ವಿರುದ್ಧ ಪುಥಿಯಾ ತಮಿಜಗಮ್ ಪಕ್ಷದ ಮುಖಂಡರೊಬ್ಬರು 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಕೊಳಗೇರಿ ನಿವಾಸಿಗಳು ಮತ್ತು ಗುಡಿಸಲುಗಳಲ್ಲಿ ವಾಸಿಸುವ ಬಡವರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದ್ದು, ನಿರೂಪಕ ಕಮಲ್ ಹಾಸನ್ ಜೊತೆ ಬಿಗ್ ಬಾಸ್ ಸ್ಪರ್ಧಿ ಮತ್ತು ಕೋರಿಯೋಗ್ರಾಫರ್ ಗಾಯತ್ರಿ ರಘುರಾಮ್, ನಿರ್ಮಾಣ ಸಂಸ್ಥೆ, ಖಾಸಗಿ ಚಾನಲ್`ಗೂ ನೋಟಿಸ್ ಜಾರಿ ಮಾಡಲಾಗಿದೆ.
ಬಿಗ್ ಬಾಸ್ ಸ್ಪರ್ಧಿ ಗಾಯತ್ರಿ ರಘುರಾಮ್ ಅವರು ಕೊಳಗೇರಿ ನಿವಾಸಿಗಳು ಮತ್ತು ಬಡವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ್ದಾರೆ ಎಂಬುದು ಆರೋಪ. ಮತ್ತೊಬ್ಬ ನಟನ ವರ್ತನೆ ಕುರಿತಂತೆ ಬಿಗ್ ಬಾಸ್ ಮನೆಯಲ್ಲಿ ಕೋಪದಿಂದ ಮಾತನಾಡಿದ್ದ ಗಾಯತ್ರಿ, ನಿನ್ನ ವರ್ತನೆ ಸ್ಲಮ್`ನವರ ರೀತಿ ಎಂದು ನಿಂದಿಸಿದ್ದರು. ಇದರಿಂದ ಸ್ಲಮ್ ನಿವಾಸಿಗಳು ಮತ್ತು ಬಡವರ ಭಾವನೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ 7 ದಿನಗಳಲ್ಲಿ ಕ್ಷಮೆಯಾಚಿಸದಿದ್ದರೆ 100 ಕೋಟಿ ರೂ. ಮಾನನಷ್ಟ ಪರಿಹಾರ ನೀಡುವಂತೆ ನೋಟಿಸ್`ನಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ