Webdunia - Bharat's app for daily news and videos

Install App

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ತಿರುವು

Webdunia
ಗುರುವಾರ, 8 ಡಿಸೆಂಬರ್ 2016 (09:47 IST)
ಓಂ ಅಹುಜಾ
 
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟೆಲಿವಿಶನ್ ಮೂಲಕ ದೇಶವನ್ನು ಉದ್ದೇಶಿಸಿ  ಮಾತನಾಡಿದ್ದು ಭಾರತದ ಮಟ್ಟಿಗೆ ಒಂದು ಐತಿಹಾಸಿಕ ಮತ್ತು ವಿಶೇಷ ಸಂಜೆಯಾಗಿತ್ತು. ಏಕೆಂದರೆ, ಅಂದು ಅವರು ``ಸ್ವಚ್ಛ ಭಾರತ’’ ಅಭಿಯಾನದ ಬಗ್ಗೆ ನೀಡಿದ ಸಂದೇಶ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿರಲಿಲ್ಲ. ಬದಲಿಗೆ ಇಡೀ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಪ್ರತಿಬಿಂಬಿತವಾಗುವಂತಿತ್ತು. ಅದೇ ರೀತಿ ಈ ಮಂಗಳವಾರ ಭಾರತೀಯರು ಮತ್ತು ಜಾಗತಿಕ ಇತಿಹಾಸಕ್ಕೆ ಐತಿಹಾಸಿಕ ದಿನವಾಗಿತ್ತು. ಕಪ್ಪು ಹಣವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಂದು 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ದಿಟ್ಟ ಹೆಜ್ಜೆಯನ್ನು ಇಟ್ಟಿತು. ಅದೇ ದಿನ, ಅಮೇರಿಕಾದ ಜನತೆ ಹೊಸ ಅಧ್ಯಕ್ಷನನ್ನು ಆಯ್ಕೆ ಮಾಡಿತು. ಈ ಎರಡೂ ಪ್ರಕರಣಗಳ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ ಕಂಡು ಬಂದಿತ್ತಾದರೂ ಈಗ ಸುಧಾರಣೆ ಹಾದಿ ಹಿಡಿದಿದೆ. 
 
ಕೇಂದ್ರ ಸರ್ಕಾರದ ಈ ದೃಢ ನಿರ್ಧಾರದಿಂದಾಗಿ ಪರ್ಯಾಯ ಆರ್ಥಿಕತೆ ಸೃಷ್ಟಿ ಮಾಡಿದ್ದ ಕಪ್ಪು ಹಣ ಸಂಪೂರ್ಣ ನಿರ್ಮೂಲನೆಯಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಸ್ವಚ್ಛತೆ ಕಂಡುಬರಲಿದೆ. ಈ ನಿರ್ಧಾರದಿಂದ ಖೋಟಾ ನೋಟುಗಳ ಹಾವಳಿ ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ನೆರವು ಸ್ಥಗಿತಗೊಳ್ಳಲಿದೆ. ಕೇಂದ್ರ ಸರ್ಕಾರದ ಈ ದಿಢೀರ್ ನಿರ್ಧಾರದಿಂದ ಜನಸಾಮಾನ್ಯರಿಗೆ ತಾತ್ಕಾಲಿಕವಾಗಿ ಸ್ವಲ್ಪ ತೊಂದರೆಯಾಗುತ್ತದೆ. ಆದರೆ, ಮುಂದಿನ 2-3 ತಿಂಗಳಲ್ಲಿ ರಚನಾತ್ಮಕವಾದ ಸುಧಾರಣೆ ಆಗಲಿದ್ದು, ಈ ಮೂಲಕ ಹಣ ವಹಿವಾಟು ಮತ್ತು ತೆರಿಗೆ ಸಂಗ್ರಹ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲಿವೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಬ್ರಿಗೇಡ್‍ನಂತಹ ಸಂಘಟಿತ ಡೆವಲಪರ್‍ಗಳ ಸಮುದಾಯ ಮುಕ್ತಕಂಠದಿಂದ ಸ್ವಾಗತಿಸಿದೆ.
 
ಇಂತಹ ಲೆಕ್ಕವಿಲ್ಲದ ಹಣ ಭೂಮಿ, ಬಂಗಾರ ಮತ್ತು ಇತರೆ ಬೆಲೆ ಬಾಳುವ ವಸ್ತುಗಳ ಮೇಲೆ ಹೂಡಿಕೆಯಾಗಿದೆ ಎಂದು ಸಾಮಾನ್ಯವಾಗಿ ಮತ್ತು ತೆರಿಗೆ ಸಲಹೆಗಾರರು ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮುಂದಿನ ಕೆಲವು ದಿನಗಳಲ್ಲಿ ರಿಯಲ್ ಎಸ್ಟೇಟ್ ಮತ್ತು ಚಿನ್ನದ ಮಾರುಕಟ್ಟೆಗಳ ಮೇಲೆ ಸಾಕಷ್ಟು ಹೊಡೆತ ಬೀಳಲಿದೆ ಎಂದು ಹಲವು ಮಾಧ್ಯಮ ವರದಿಗಳು ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ಸಾಮಾನ್ಯ ರೀತಿಯಲ್ಲಿ ತುಲನೆ ಮಾಡುವ ಬದಲು ಇದರ ಪರಿಣಾಮಗಳು ಏನೆಂಬುದನ್ನು ವೈಜ್ಞಾನಿಕವಾಗಿ ಅವಲೋಕನ ಮಾಡುವ ಅಗತ್ಯವಿದೆ.
 
ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಪುಣೆ ಮತ್ತು ಗುರುಗಾಂವ್‍ನಂತಹ ನಗರಗಳಲ್ಲಿ ಅಪಾರ್ಟ್‍ಮೆಂಟ್‍ಗಳನ್ನು ಖರೀದಿಸುವವರಲ್ಲಿ ಬಹುತೇಕ ಮಂದಿ ವೇತನ ಪಡೆಯುವವರು. ಮೂರನೇ ಎರಡರಷ್ಟು ಮಂದಿ ಮನೆ ಖರೀದಿಸಲು ಅದನ್ನು ಅಡಮಾನ ಇಡುವವರೇ ಆಗಿದ್ದಾರೆ. ಇದನ್ನು ಅಂಕಿಅಂಶಗಳ ಸಹಿತ ಇಲ್ಲಿ ಹೇಳಲು ಬಯಸುತ್ತೇನೆ. ಈ ವರ್ಗದ ವೃತ್ತಿಪರರು ಸಾಮಾನ್ಯವಾಗಿ 50 ಲಕ್ಷ ರೂಪಾಯಿಯಿಂದ 2 ಕೋಟಿ ರೂಪಾಯಿಗಳ ಮೌಲ್ಯದ ಮನೆ ಅಥವಾ ಅಪಾರ್ಟ್‍ಮೆಂಟ್‍ಗಳನ್ನು ಖರೀದಿಸುತ್ತಾರೆ. ಇದಕ್ಕಾಗಿ ಇವರು ಬ್ಯಾಂಕುಗಳಿಂದ ಸಾಲ ಪಡೆಯುತ್ತಾರೆ. 
 
ಇನ್ನೂ ವಿವರವಾಗಿ ಅವಲೋಕನ ಮಾಡುವುದಾದರೆ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಮತ್ತು ಮೈಸೂರಿನಂತಹ ನಗರಗಳಲ್ಲಿ ಶೇ. 90 ರಷ್ಟು ವೃತ್ತಿನಿರತರಿದ್ದಾರೆ. ಇವರೆಲ್ಲಾ ಸೇವಾ ಕ್ಷೇತ್ರ ಮತ್ತು ಉತ್ಪಾದನಾ ವಲಯಗಳಲ್ಲಿ ಉದ್ಯೋಗಿಗಳಾಗಿದ್ದು, ಸಂಬಳವನ್ನೇ ಅವಲಂಬಿಸಿದವರಾಗಿದ್ದಾರೆ. ಈ ತಮ್ಮ ಸಂಬಳದಲ್ಲೇ ಅವರು ಪ್ರತಿ ತಿಂಗಳ ಕಂತನ್ನು ಪಾವತಿ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿರುವುದರಿಂದ ಈ ವರ್ಗದ ಮನೆ ಖರೀದಿದಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೇ, ಇವರ ಬಳಿ ಲೆಕ್ಕವಿಲ್ಲದ ಅಂದರೆ ಕಪ್ಪುಹಣ ಇದೆಯೇ ಎಂಬ ಪ್ರಮೇಯವೇ ಇರುವುದಿಲ್ಲ. ಅದೇರೀತಿ ಇಂತಹ ಹಣ ಚಲಾವಣೆ ಮಾಡುವ ಅವಕಾಶವೂ ಇರುವುದಿಲ್ಲ. ಆದರೆ, ಅಸಂಘಟಿತ ಡೆವಲಪರ್ ಸಮೂಹಗಳು ಕೇಂದ್ರ ಸರ್ಕಾರದ ನಿರ್ಧಾರದಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ, ಈ ವಲಯ ಬಹುತೇಕ ಲೆಕ್ಕವಿಲ್ಲದ ಹಣದ ವ್ಯವಹಾರಗಳ ಮೇಲೆಯೇ ಅವಲಂಬಿತವಾಗಿರುತ್ತದೆ. ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಗರಗಳಲ್ಲಿನ ಸಂಘಟಿತ ಮತ್ತು ಖ್ಯಾತನಾಮ ಡೆವಲಪರ್‍ಗಳಲ್ಲಿರುವ 50 ಲಕ್ಷದಿಂದ 2 ಕೋಟಿ ರೂಪಾಯಿ ವರ್ಗದ ಮನೆ ಅಥವಾ ಅಪಾರ್ಟ್‍ಮೆಂಟ್‍ಗಳ ಬೇಡಿಕೆಯಲ್ಲಿ ಗಣನೀಯ ಇಳಿಕೆ ಕಂಡು ಬರಲಿದೆ ಎಂಬುದು ಶುದ್ಧ ಸುಳ್ಳು.
 
ಐಷಾರಾಮಿ ವರ್ಗದಲ್ಲಿ (2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಮನೆ/ಅಪಾರ್ಟ್‍ಮೆಂಟ್) ಮನೆಗಳನ್ನು ಖರೀದಿಸುವವರಲ್ಲಿ ವೃತ್ತಿಪರರು ಅಥವಾ ಸಂಬಳದಾರರು ಇದ್ದಾರೆ. ಬೆಂಗಳೂರು, ಹೈದ್ರಾಬದ್ ಮತ್ತು ಚೆನ್ನೈ ನಗರಗಳಲ್ಲಿ ಶೇ. 60 ರಷ್ಟು ಮಂದಿ ಈ ವರ್ಗಕ್ಕೆ ಸೇರುತ್ತಾರೆ. ಇನ್ನುಳಿದ ಶೇ. 40 ರಷ್ಟು ಜನರು ಸ್ವಯಂ ಉದ್ಯೋಗ ಅಥವಾ ಮತ್ತಿತರೆ ಕ್ಷೇತ್ರಗಳಿಗೆ ಸೇರಿರುತ್ತಾರೆ. ಈ ಐಷಾರಾಮಿ ವರ್ಗದಲ್ಲಿ ತಕ್ಷಣಕ್ಕೆ ಹೆಚ್ಚು ತೊಂದರೆಗೆ ಸಿಲುಕಿಕೊಳ್ಳುವವರೆಂದರೆ ಅಸಂಘಟಿತ ವಲಯದ ಡೆವಲಪರ್‍ಗಳು. ಏಕೆಂದರೆ, ಕಪ್ಪು ಹಣ ಚಲಾವಣೆ ಸಂಪೂರ್ಣ ಸ್ಥಗಿತವಾಗಿರುವುದರಿಂದ ಹಣ ಚಲಾವಣೆ ಸ್ಥಗಿತಗೊಂಡಿದೆ. ಇದರ ಪರಿಣಾಮ ಐಷಾರಾಮಿ ಅಪಾರ್ಟ್‍ಮೆಂಟ್‍ಗಳ ಬೇಡಿಕೆ ಕಡಿಮೆಯಾಗಿ ಬೆಲೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಲಿದೆ. ಆದರೆ, ಬೆಂಗಳೂರು, ಹೈದ್ರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಇಂತಹ ಹಣವನ್ನು ಮಾನ್ಯ ಮಾಡದಿರುವ ಹಿನ್ನೆಲೆಯಲ್ಲಿ ಹೆಸರಾಂತ ಮತ್ತು ಸಂಘಟಿತ ವಲಯದ ಡೆವಲಪರ್‍ಗಳಿಗೆ ಇಂತಹ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.
 
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಭೂಮಿಯ ವ್ಯವಹಾರಗಳು ಸಂಪೂರ್ಣವಾಗಿ ಕುಸಿಯುತ್ತವೆ ಎಂದು ಹಲವಾರು ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ. ನಾವು 1995, 2001 ಮತ್ತು 2008 ರ ವರ್ಷಗಳ ವ್ಯವಹಾರಗಳನ್ನು ಗಮನಿಸಿದರೆ ಆ ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಬೇಡಿಕೆಯಲ್ಲಿ ಕುಸಿತ ಕಂಡಿತ್ತು. ಆದರೆ, ವ್ಯವಹಾರ ಮತ್ತು ಬೆಲೆಯಲ್ಲಿ ಇಳಿಕೆ ಆಗಿರಲೇ ಇಲ್ಲ. ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಗರಗಳಲ್ಲಿ ಈಗಾಗಲೇ ದೊಡ್ಡ ಮತ್ತು ಅತ್ಯುತ್ತಮ ವಾತಾವರಣ ಮತ್ತು ಪ್ರದೇಶಗಳಲ್ಲಿ ಭೂಮಿಯ ಕೊರತೆ ಎದುರಾಗಿದೆ. ಹೀಗಾಗಿ ಭೂಮಿ ಮಾರಾಟ ಮಾಡುವವರು ಅಥವಾ ಭೂಮಾಲೀಕರು ದರ ಇಳಿಕೆಯ ಬಗ್ಗೆ ಆತಂಕಪಡುವ ಅಗತ್ಯವೇ ಇಲ್ಲ. ಭೂಮಿ ಅಗತ್ಯಕ್ಕಿಂತ ಹೆಚ್ಚಾಗಿ ಲಭ್ಯವಿರುವ ಕೆಲವು ಪ್ರದೇಶಗಳಲ್ಲಿ ಬೇಡಿಕೆಯಲ್ಲಿ ಕುಸಿತ ಕಂಡು ಬಂದು ಬೆಲೆಯಲ್ಲೂ ಇಳಿಕೆ ಆಗಬಹುದು. ಇದರ ಲಾಭ ಸಂಪೂರ್ಣವಾಗಿ ಮನೆ ಅಥವಾ ನಿವೇಶನ ಖರೀದಿಸುವವರಿಗೆ ಆಗಲಿದೆ.
ಇದರರ್ಥ ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಗರಗಳಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಲಿದೆಯೇ? ಈ ಎಲ್ಲಾ ನಗರಗಳಲ್ಲಿ ಸಿಬಿಡಿ ಪ್ರದೇಶ ಅಥವಾ ವಾಣಿಜ್ಯ ಸಮುದಾಯ ಸದಾ ಚಟುವಟಿಕೆಯಿಂದ ಇರುವ ಪ್ರದೇಶಗಳಿವೆ. ಬಹುತೇಕ ಈ ಪ್ರದೇಶಗಳಲ್ಲಿ (ಬೆಂಗಳೂರಿನ ಗಾಂಧಿನಗರ, ಹೈದ್ರಾಬಾದ್‍ನ ಅಬಿಡ್ಸ್ ಮತ್ತು ಚೆನ್ನೈನ ಚೆಟ್‍ಪೇಟೆ) ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಲೆಕ್ಕವಿಲ್ಲದ ಹಣದ ವ್ಯವಹಾರ ಹೆಚ್ಚಾಗಿ ನಡೆಯುತ್ತದೆ. ಇಲ್ಲಿ ಸುಮಾರು ಶೇ. 50 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಈ ಹಣದ ವ್ಯವಹಾರ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀತಿಯಿಂದ ಈ ವ್ಯವಹಾರ ಗಂಭೀರ ಸ್ವರೂಪದ ಪರಿಣಾಮ ಎದುರಿಸಲಿದೆ. ಇದಲ್ಲದೇ, ಸಿಬಿಡಿ ಪ್ರದೇಶಗಳಲ್ಲಿರುವ ಸಣ್ಣ ಮಟ್ಟದ ಡೆವಲಪರ್‍ಗಳು ಅಥವಾ ವೇತನೇತರ ನೌಕರರು ಸಹ ಸರ್ಕಾರದ ಈ ನಿರ್ಧಾರದಿಂದ ತೊಂದರೆಗೆ ಸಿಲುಕಲಿದ್ದಾರೆ.
 
ರೀಸೇಲ್ ವ್ಯವಹಾರಗಳ ಮೇಲೆ ಇದರ ಗಂಭೀರ ಪರಿಣಾಮ ಬೀರಲಿದೆ ಎಂಬುದು ನಿಜವೇ? ಎನ್‍ಸಿಆರ್ ಮತ್ತು ಮುಂಬೈಗೆ ಹೋಲಿಸಿದರೆ ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಬಂಡವಾಳ ಹೂಡಿಕೆ ಮಾಡುವವರ ಸಂಖ್ಯೆ ಸೀಮಿತ ಮಟ್ಟದ್ದಾಗಿದೆ. ಈ ನಗರಗಳಲ್ಲಿ ಶೇ. 70 ರಷ್ಟು ಮಂದಿ ತಮ್ಮ ಸ್ವಂತ ಬಳಕೆಗಾಗಿ ಮನೆ ಅಥವಾ ನಿವೇಶನ ಅಥವಾ ಅಪಾರ್ಟ್‍ಮೆಂಟ್‍ಗಳನ್ನು ಖರೀದಿಸುತ್ತಾರೆ. ಉಳಿದ ಶೇ. 30 ರಷ್ಟು ಮಂದಿ 2 ನೇ ದರ್ಜೆಯ ನಗರಗಳಿಗೆ ಸೇರಿದವರು ಅಥವಾ ಅನಿವಾಸಿ ಭಾರತೀಯರಾಗಿರುತ್ತಾರೆ. ಇವರ್ಯಾರೂ ತಪ್ಪು ಸುದ್ದಿ ಹರಡುವವರಲ್ಲ. ಎನ್‍ಸಿಆರ್, ಮುಂಬೈ, ಪುಣೆ ಮತ್ತು ಕೊಲ್ಕತ್ತಾದಂತಹ ನಗರಗಳಲ್ಲಿ ಹೂಡಿಕೆದಾರರು ತಮ್ಮ ಆಸ್ತಿ  ಮಾರಾಟ ಮಾಡುವ ವಿಚಾರದಲ್ಲಿ ದಿಗಿಲು ಬೀಳುವ ಮತ್ತು ರೀಸೇಲ್ ಮಾರುಕಟ್ಟೆಯಲ್ಲಿ ದರ ಕುಸಿತವಾಗುವ ಸಾಧ್ಯತೆಗಳಿವೆ. ಆದರೆ, ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಗರಗಳಲ್ಲಿ ಈ ಸಾಧ್ಯತೆಗಳು ತುಂಬಾ ವಿರಳ ಎಂದೇ ಹೇಳಬಹುದು.
 
ಈ ವಲಯದಲ್ಲಿ ಅಭಿವೃದ್ಧಿ ಗಂಭೀರ ಸ್ವರೂಪದಲ್ಲಿ ಪರಿಣಾಮ ಎದುರಿಸುವ ಎಲ್ಲಾ ಲಕ್ಷಣಗಳಿವೆ. ಏಕೆಂದರೆ, ಈ ಕ್ಷೇತ್ರ ಬಹುತೇಕ ಹೂಡಿಕೆ ಲೆಕ್ಕವಿಲ್ಲದ ಅಥವಾ ಕಾಳಧನದ ಆಧಾರದಲ್ಲೇ ನಡೆಯುತ್ತದೆ. ದೇಶಾದ್ಯಂತ ಇರುವ ನಗರಗಳಲ್ಲಿ ಗಂಭೀರ ಪರಿಣಾಮ ಎದುರಿಸಲಿರುವ ಈ ಕ್ಷೇತ್ರ ಮತ್ತೆ ಸಹಜ ಸ್ಥಿತಿಗೆ ತಲುಪಲು ಸುದೀರ್ಘ ಸಮಯ ಬೇಕಾಗುತ್ತದೆ. ಹುಬ್ಬಳ್ಳಿ, ಬೆಳಗಾವಿ, ಕೊಯಮತ್ತೂರು ಮತ್ತು ಕೊಚ್ಚಿಯಂತಹ ಎರಡನೇ ದರ್ಜೆಯ ನಗರಗಳಲ್ಲಿ ಕಳೆದ ಹಲವು ವರ್ಷಗಳಿಂದ ಬೇಡಿಕೆ ಪ್ರಮಾಣ ಸಾಕಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ನಗರಗಳಲ್ಲಿ ಹೆಚ್ಚಿನ ಸವಾಲುಗಳು ಎದುರಾಗಲಿವೆ.
 
ಬೆಂಗಳೂರು, ಚೆನ್ನೈ, ಮೈಸೂರು ಮತ್ತು ಹೈದ್ರಾಬಾದ್ ನಗರಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲಿನ ಷೇರುಗಳ ಪ್ರಮಾಣ ಏರಿಕೆ ಆಗುವ ಹಿನ್ನೆಲೆಯಲ್ಲಿ ಇದರ ಲಾಭ ಸಂಘಟಿತ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆಗಲಿದೆ. ಮುಂದಿನ ಕೆಲವು ತಿಂಗಳಲ್ಲಿ ಆರ್‍ಇಆರ್‍ಎ ಜಾರಿಗೆ ಬರುವ ಸಾಧ್ಯತೆಗಳಿದ್ದು, ಉದ್ಯಮ ಮತ್ತಷ್ಟು ಬಲವರ್ಧನೆಯಾಗಲಿದೆ ಎಂಬ ನಿರೀಕ್ಷೆ ಇದೆ. ಇದಲ್ಲದೇ, ಹಣದ ವ್ಯವಹಾರ ಸುಧಾರಣೆ ಕಾಣಲಿದೆ. ತೆರಿಗೆ ವ್ಯಾಪ್ತಿಯಲ್ಲಿ ಇಲ್ಲದ ನಾಗರಿಕರು ಇದರ ವ್ಯಾಪ್ತಿಗೆ ಬರಲಿದ್ದಾರೆ. ಈ ಮೂಲಕ ದೇಶದ ತೆರಿಗೆ ಸಂಗ್ರಹದಲ್ಲಿ ಮತ್ತು ಜಿಡಿಪಿ ಪ್ರಮಾಣದಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ. ಇದು ದೇಶದ ಆರ್ಥಿಕ ಪ್ರಗತಿಗೆ ನೆರವಾಗಲಿದೆ. ಅಲ್ಲದೇ, ಸಂಘಟಿತ ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚು ಜಾಗದಲ್ಲಿ ಉದ್ಯಮವನ್ನು ವಿಸ್ತರಣೆ ಮಾಡಲು ಸಹಕಾರಿಯಾಗುತ್ತದೆ.
 
ಮುಂದಿನ ತಿಂಗಳುಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸ ಇಮ್ಮಡಿಯಾಗಲಿದೆ. ಈ ಮೂಲಕ ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅದರಲ್ಲಿಯೂ ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಗರಗಳಲ್ಲಿ ವಸತಿ ಯೋಜನೆಗಳ ಕಾರಿಡಾರ್‍ಗಳಲ್ಲಿ ವಿದೇಶಿ ಬಂಡವಾಳದಾರರನ್ನು ಆಕರ್ಷಿಸುವ ನಿರೀಕ್ಷೆ ಇದೆ. ಆರ್‍ಇಆರ್‍ಎ, ಬೇನಾಮಿ ಕಾಯ್ದೆ, ಜಿಎಸ್‍ಟಿಯಂತಹ ಕೇಂದ್ರ ಸರ್ಕಾರದ ಹೊಸ ಉಪಕ್ರಮಗಳಿಂದಾಗಿ ಸರ್ಕಾರದ ದೂರದೃಷ್ಟಿ ಯೋಜನೆ ಆಗಿರುವ 2022 ರ ವೇಳೆಗೆ ``ಎಲ್ಲರಿಗೂ ವಸತಿ’’ ಕಾರ್ಯಕ್ರಮದಲ್ಲಿ ದೊಡ್ಡ ಮಟ್ಟದಲ್ಲಿ ಸಂಘಟಿತ ರಿಯಲ್ ಎಸ್ಟೇಟ್ ಉದ್ಯಮಿಗಳು ಪಾಲ್ಗೊಳ್ಳಬಹುದಾಗಿದೆ. (ಲೇಖಕರು ಬ್ರಿಗೇಡ್ ಗ್ರೂಪ್‍ನ ವಸತಿ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ.)
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments