Webdunia - Bharat's app for daily news and videos

Install App

ಸ್ಮಾರ್ಟ್‌ಫೋನ್ ಅನುಕೂಲ ಅನಾನುಕೂಲಗಳೆಷ್ಟು

Webdunia
ಗುರುವಾರ, 12 ಜುಲೈ 2018 (18:37 IST)
ಜೀವನ ಎನ್ನುವ ಹರಿವಿನಲ್ಲಿ ಮನುಷ್ಯ ತನ್ನನ್ನ ತಾನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾನೆ. ಬಹಳ ಹಿಂದೆ ಒಂದು ಮಾತಿತ್ತು "ಆಡು ಮುಟ್ಟದ ಸೊಪ್ಪಿಲ್ಲ" ಅಂತ ಆದರೆ ಈಗ ಅದನ್ನು "ಮೊಬೈಲ್ ಬಳಸದ ಜನರಿಲ್ಲ" ಎಂದು ಬದಲಾಯಿಸುವ ಕಾಲ ಬಂದಿದೆ ಎಂದರೆ ತಪ್ಪಾಗಲಾರದು.

ಮನುಷ್ಯನು ಅಸಾಮಾನ್ಯವಾದ ಬುದ್ದಿಮತ್ತೆಯಲ್ಲಿ ಉಳಿದೆಲ್ಲ ಜೀವರಾಶಿಗಳಿಗಿಂತ ಭಿನ್ನವಾಗಿದ್ದಾನೆ. ಅದಕ್ಕೆ ಒಳ್ಳೆಯ ನಿದರ್ಶನವೆಂದರೆ 21 ನೇ ಶತಮಾನದ ಗಣನೀಯ ಆವಿಷ್ಕಾರ ಎಂದೇ ಹೇಳಬಹುದಾದ "ಜಂಗಮವಾಣಿ" (ಮೊಬೈಲ್).
 
ಮೊದಲೆಲ್ಲಾ ನಾವು ಶ್ರೀಮಂತರ ಅಥವಾ ಅನುಕೂಲವಂತರ ಕೈಯಲ್ಲಿ ಮಾತ್ರ ನೋಡಬಹುದಾಗಿದ್ದ ಈ ಮೊಬೈಲ್ ಈಗ ಜನಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾಗಿದೆ. ಕಾಲ ಬದಲಾದಂತೆ ತಂತ್ರಜ್ಞಾನದಲ್ಲಿಯೂ ಅಭೂತಪೂರ್ವ ಬೆಳವಣಿಗೆಗಳಾಗಿವೆ. ಬೆರಳ ತುದಿಯಲ್ಲಿ ಜಗತ್ತು ಎಂಬಂತೆ ನಾವು ಕುಳಿತಲ್ಲಿಯೇ ಜಗತ್ತಿನ ಆಗುಹೋಗುಗಳನ್ನು ತಿಳಿಯುವಂತಾಗಿದೆ. ಈ ಮೊದಲು ಸಮಯ ಕಳೆಯಲು ದೂರದರ್ಶನ, ರೇಡಿಯೋ, ಕತೆ ಕಾದಂಬರಿಗಳಿಗೆ ಮೊರೆ ಹೋಗುತ್ತಿದ್ದ ಯುವಪೀಳಿಗೆ ಈಗ ಊಟ ತಿಂಡಿಯನ್ನು ಬೇಕಾದರೂ ಬಿಡಬಲ್ಲರು ಆದರೆ ಮೊಬೈಲ್ ಇಲ್ಲದೇ 10 ನಿಮಿಷ ಕೂಡಾ ಇರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
 
ಅತೀಯಾದರೆ ಅಮೃತವೂ ವಿಷ ಎಂಬಂತೆ ಇಂದು ಚಿಕ್ಕವಯಸ್ಸಿನ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಂದು ಮೊಬೈಲ್ ಆವರಿಸಿಕೊಂಡಿದೆ ಎಂಬುದನ್ನು ನಾವು ಒಪ್ಪಬೇಕಾದ ಸತ್ಯ ಮೊಬೈಲ್ ಬಳಕೆ ಜಾಸ್ತಿಯಾದಂತೆ ನಾನಾ ವಿಧದ ಮೊಬೈಲ್ ಕಂಪನಿಗಳು ಜನರನ್ನು ಸೆಳೆಯಲು ನಾನಾ ರೀತಿಯ ವೈಶಿಷ್ಟ್ಯ ಹಾಗೂ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅಲ್ಲದೇ ಒಂದೇ ಸಾಧನದಲ್ಲಿ ವೀಡಿಯೊ ಗೇಮ್‌ನಿಂದ ಹಿಡಿದು ಟಿವಿ ಕಂಪ್ಯೂಟರ್‌ವರೆಗಿನ ಎಲ್ಲಾ ಪ್ರಯೋಜನಗಳನ್ನು ನೀಡುತ್ತಿದೆ ಇದರಿಂದ ಜನರಿಗೆ ಒಂದೇ ಸಾಧನದಲ್ಲಿ ಹೆಚ್ಚು ಉಪಯೋಗಗಳು ಆಗುವುದರಿಂದ ಇಂದು ಮೊಬೈಲ್ ಎನ್ನುವುದು ಮನುಷ್ಯನ ಅವಿಭಾಜ್ಯ ಅಂಗ ಎಂದು ಮಾರ್ಪಾಡಾಗಿದೆ.
 
ನಾಣ್ಯಕ್ಕೆ ಯಾವತ್ತಿಗೂ ಎರಡು ಮುಖವಿರುತ್ತದೆ ಹಾಗೆಯೇ ಮನುಷ್ಯ ಎಷ್ಟೇ ಬುದ್ಧಿವಂತಿಕೆಯಿಂದ ಹೊಸ ಆವಿಷ್ಕಾರಗಳನ್ನು ಮಾಡಿದರೂ ಸಹ ಅದರಲ್ಲಿ ಯಾವುದಾದರೂ ಕುಂದುಕೊರತೆ ಇದ್ದೇ ಇರುತ್ತದೆ ಆದರೆ ಅದರ ಪರಿಣಾಮ ಮಾತ್ರ ನಮಗೆ ಕಂಡುಬರುವುದು ತಡವಾಗಿಯೇ. ಮೊಬೈಲ್ ನಮಗೆ ವರವೂ ಹೌದು ಶಾಪವೂ ಹೌದು ಹಾಗಾದರೆ ಈ ಜಂಗಮವಾಣಿಯ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಏನಿರಬಹುದು ನೋಡೋಣ......
* ಸುಲಭವಾಗಿ ಸಂಪರ್ಕದಲ್ಲಿರಲು:
ಹಿಂದೆಲ್ಲಾ ಬಂಧುಗಳೊಂದಿಗೆ ಬೆರೆಯಬೇಕು ಸಂಭ್ರಮಿಸಬೇಕು ಎನ್ನುವ ಕಾರಣಕ್ಕೆ ಹಬ್ಬ ಹರಿದಿನಗಳನ್ನು ಮಾಡುತ್ತಿದ್ದರು ಆ ಸಮಯದಲ್ಲಿ ಮಾತ್ರ ನಾವು ನಮ್ಮ ಬಂಧುಗಳೊಂದಿಗೆ ಮಾತನಾಡುವುದು ಹರಟೆಗಳು, ಸಂತೋಷ ಕೂಟಗಳು ನಡೆಯುತ್ತಿದ್ದವು ಆದರೆ ಇಂದು ಹಂಗಲ್ಲ ಈ ಮೊಬೈಲ್ ಎಂಬ ಮಾಯೆ ನಮ್ಮನ್ನು ಕ್ಷಣದಲ್ಲಿಯೇ ಯಾರಿಗೆ ಬೇಕೋ ಅವರಿಗೆ ತಕ್ಷಣವೇ ಸಂಪರ್ಕಿಸುತ್ತದೆ. ಜನರನ್ನು ಪರಸ್ಪರ ಹತ್ತಿರಕ್ಕೆ ಕರೆತಂದಿದೆ. ದೂರದಲ್ಲೆಲ್ಲೋ ಇರುವ ಆಪ್ತರೊಂದಿಗೆ ನಾವಿರುವ ಸ್ಥಳದಿಂದಲೇ ವಿಡಿಯೋ ಕಾಲ್‌ಗಳ ಮೂಲಕ ನಾವು ಅವರನ್ನು ನೋಡುತ್ತಾ ಮಾತನಾಡಬಹುದು. ಯಾವ ಸಮಯದಲ್ಲೇ ಆಗಲಿ ಎಷ್ಟೇ ದೂರವಿದ್ದರೂ ನಾವು ಸುಲಭವಾಗಿ ಸಂಪರ್ಕದಲ್ಲಿರಲು ಜಂಗಮವಾಣಿಯು ಸಹಾಯವಾಗಿದೆ.
 
* ಸಮಯದ ಉಳಿತಾಯಕ್ಕೆ: 
ಮೊಬೈಲ್ ಬಳಕೆಯಿಂದ ಕೆಲಸ ಕಾರ್ಯಗಳು ಶೀಘ್ರವಾಗಿ ಸಾಗುತ್ತಿವೆ. ಮೊಬೈಲ್‌ನಲ್ಲಿ ಇರುವ ಆಪ್‌ಗಳಿಂದ ಊಟ-ತಿಂಡಿ, ಬಟ್ಟೆಗಳನ್ನು, ನಾನಾ ರೀತಿಯ ಸೌಂದರ್ಯವರ್ಧಕಗಳನ್ನು, ದಿನನಿತ್ಯದ ಬಳಕೆಯ ವಸ್ತುಗಳನ್ನೂ ಸಹ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಇದರಿಂದ ದಿನದ ಬಹಳಷ್ಟು ವೇಳೆಯು ಉಳಿತಾಯವಾಗುತ್ತದೆ. ನಮ್ಮ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್ ಬಿಲ್‌ಗಳನ್ನೂ ಸಹ ಪಾವತಿಸಬಹುದಾಗಿದೆ
 
* ಮನೋರಂಜನೆಗೆ: 
ಸಮಯ ಕಳೆಯಲು ಮೊಬೈಲ್ ಅತ್ಯುತ್ತಮ ಸಂಗಾತಿಯಾಗಿದೆ. ಇದರಲ್ಲಿ ನಾವು ಗೇಮ್‌ಗಳನ್ನು, ಓದಲು ಪುಸ್ತಕಗಳನ್ನೂ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬೇಸರವಾದಾಗ ಸಂಗೀತವನ್ನೂ ಸಹ ಕೇಳಬಹುದಾಗಿದೆ. ಇತ್ತೀಚಿಗೆ ಯುವಜನತೆಯು ಟಿ.ವಿ, ರೇಡಿಯೋಗಳಿಗಿಂತ ಮೊಬೈಲ್‌ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ ಎಂದರೆ ತಪ್ಪಾಗಲಾರದು.
 
* ಮಾರ್ಗದರ್ಶಿ: 
ಹಿಂದೆ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಮಾತಿತ್ತು ಆದರೆ ಇಂದು ಮೊಬೈಲ್ ಒಂದು ನಿಮ್ಮ ಕೈಯಲ್ಲಿ ಇದ್ದರೆ ಸಾಕು ಯಾವ ದೇಶವೇ ಆಗಿರಲಿ ಕೋಶವೇ ಆಗಿರಲ್ಲಿ ಕ್ಷಣಾರ್ಧದಲ್ಲಿ ನಿಮ್ಮ ಕಣ್ಣ ಮುಂದೆ ನೀವು ಕಾಣಬಹುದು ಅಲ್ಲದೇ ಇದರ ಮೂಲಕ ಯಾವುದೇ ಸ್ಥಳ ಅಲ್ಲಿನ ಪರಿಸರ, ಹವಾಮಾನ, ಮಾರ್ಗ ಹೀಗೆ ಅದರ ಸಂಪೂರ್ಣ ಮಾರ್ಗದರ್ಶನವನ್ನು ಈ ಮೊಬೈಲ್ ಕೊಡುತ್ತದೆ.
 
* ಮಾಹಿತಿಯ ಭಂಡಾರ: 
ಜ್ಞಾನವರ್ಧನೆಗೆ ಶಾಲಾ ಕಾಲೇಜುಗಳನ್ನು ಅವಲಂಬಿಸಿದ್ದ ಜನತೆಗೆ ಈಗ ಮೊಬೈಲ್‌ನಿಂದ ಯಾವ ಮಾಹಿತಿಯನ್ನಾದರೂ ಕ್ಷಣಾರ್ಧದಲ್ಲಿ ಪಡೆಯುವಂತಾಗಿದೆ. ಗೂಗಲ್‌ನಂತಹ ಹಲವಾರು ವೆಬ್‌ಸೈಟ್‌ಗಳು ನಮಗೆ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ ಇದರ ಮೂಲಕ ಯಾವುದೇ ಭಾಷೆಯಲ್ಲಿರಲಿ ಅದನ್ನು ನಿಮಗೆ ತಿಳಿಯುವ ಭಾಷೆಗೆ ಪರಿವರ್ತಿಸಿ ನಿಮ್ಮ ಜ್ಞಾನವರ್ಧನೆಗೆ ಇದು ಸಹಾಯಕಾರಿಯಾಗಿದೆ.
 
ಒಳ್ಳೆಯದು ಅಂತಾ ಹೇಳಿದ ಮೇಲೆ ಕೆಟ್ಟದ್ದು ಇದ್ದೇ ಇರುತ್ತದೆ ಅದು ಎಲ್ಲರಿಗೂ ತಿಳಿದಿರುವ ಸಂಗತಿ ಹಾಗೆಯೇ ಮೊಬೈಲ್ ಎಷ್ಟು ಒಳ್ಳೆಯದೋ ಅಷ್ಟೇ ಅಪಾಯಕಾರಿ ಹೇಗೆ ಅಂತಾ ಹೇಳ್ತಿವಿ ಓದಿ....
* ಪರಿಸರ ಸ್ನೇಹಿ ಅಲ್ಲ: 
ಮೊಬೈಲ್ ರೇಡಿಯೊ ತರಂಗಾತಂರಗಳ ಮೂಲಕ ಕಾರ್ಯನಿರ್ವಹಿಸುವ ಮೂಲಕ ಇದು ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ ಇದು ಪೃಕೃತಿಯಲ್ಲಿರುವ ಸುಕ್ಷ್ಮ ಜೀವಕೋಶಗಳ ಮೇಲೆ ದಾಳಿ ಮಾಡುವುದಷ್ಟೇ ಅಲ್ಲ ಇದರ ತರಂಗಗಳಿಂದ ಮನುಷ್ಯ ಮತ್ತು ಪಕ್ಷಿಸಂಕುಲಗಳ ಮೇಲೆ ಅಗಾಧ ಪರಿಣಾದ ಬೀರುತ್ತದೆ ಅದಕ್ಕೆ ಉತ್ತಮ ಉದಾಹರಣೆ ಎಂದರೆ ಗುಬ್ಬಿಮರಿಯ ಸಂಕುಲಗಳೇ ವಿನಾಶ. ಮೊಬೈಲ್ ಎಂಬ ಮಾಯೆ ಬಂದ ನಂತರ ಈ ಸಂತತಿಯಲ್ಲಿ ಗಣನೀಯ ಇಳಿಕೆ ಉಂಟಾಗಿದೆ ಇದು ಹೀಗೆ ಮುಂದುವರೆದರೆ ಮುಂದೆ ನಾವು ಅದನ್ನು ಫೋಟೋಗಳಲ್ಲಿ ನೋಡುವ ಕಾಲ ಬಂದರೂ ಆಶ್ಛರ್ಯಪಡಬೇಕಾಗಿಲ್ಲ.
 
* ಆರೋಗ್ಯದ ಮೇಲೆ ದುಷ್ಪರಿಣಾಮ: 
ಈಗಿನ ವಿದ್ಯಮಾನದಲ್ಲಿ ದಿನಕ್ಕೊಂದು ರೀತಿಯ ರೋಗಗಳು ತಲೆದೋರುತ್ತಿವೆ. ಕುಳಿತಲ್ಲಿಯೇ ಎಲ್ಲಾ ಕೆಲಸಗಳು ಪೂರ್ಣವಾಗುವುದರಿಂದ ದೇಹಕ್ಕೆ ವ್ಯಾಯಾಮವಿಲ್ಲದೇ ಬೊಜ್ಜು, ಅತಿಯಾದ ತೂಕದಂತಹ ರೋಗಗಳಿಗೆ ಮನುಷ್ಯ ಬಲಿಯಾಗುತ್ತಿದ್ದಾನೆ. ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯಿಂದ ಮಹಿಳೆಯರಲ್ಲಿಯೂ ಸಹ ಬಂಜೆತನ ಕಾಣಿಸಿಕೊಳ್ಳುತ್ತಿದೆ. ಮೊಬೈಲ್‌ಗೆ ಬರುವ ತರಂಗಗಳಿಂದ ಹೃದಯಸಂಬಂಧಿ ಕಾಯಿಲೆ ಹೊಟ್ಟೆ ಹಾಗೂ ಮೂತ್ರಕೋಶಕ್ಕೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಅತೀಯಾದ ಮೊಬೈಲ್ ಬಳಕೆಯಿಂದ ದೃಷ್ಟಿದೋಷ ಹಾಗೂ ಮಿದುಳಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.
 
* ಮಾಹಿತಿಯ ಸೋರಿಕೆ:
ಅಂತರ್ಜಾಲದಲ್ಲಿ ಗೌಪ್ಯತೆ ಎನ್ನುವುದು ಮರೀಚಿಕೆಯಂತಾಗಿದೆ. ಈಗೀಗ ಹ್ಯಾಕರ್‌ಗಳ ಹಾವಳಿಯಿಂದಾಗಿ ನಮ್ಮ ಎಲ್ಲಾ ಮಾಹಿತಿಗಳು ಸೋರಿಕೆಯಾಗುವ ಸಂಭವವು ಜಾಸ್ತಿಯಾಗಿರುತ್ತದೆ ಮತ್ತು ಮೊಬೈಲ್‌ನಲ್ಲಿ ನಾವು ಬ್ರೌಸ್ ಮಾಡುವಾಗ ಕೊಡುವ ನಮ್ಮ ಮಾಹಿತಿಗಳೇ ಆಗಲಿ, ಫೋಟೋಗಳೇ ಅಗಲಿ ದುರ್ಬಳಕೆಯಾಗುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಅಲ್ಲದೇ ನಮ್ಮ ಮೊಬೈಲ್‌ಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಕದಿಯುವಂತ ಇತರ ಸ್ವಾಫ್ಟವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಯಾವುದಕ್ಕೂ ಮೊಬೈಲ್‌ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿರುವುದು ತೀರಾ ಸೂಕ್ತ.
 
* ಕೇಂದ್ರಿಕರಿಸುವಲ್ಲಿ ವಿಫಲ:
ಇಂದಿನ ಮಕ್ಕಳೂ ತುಂಬಾ ಚೂಟಿಯಾಗಿರುತ್ತಾರೆ ಆದರೆ ಬರುಬರುತ್ತಾ ಅವರಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಮಂದಬುದ್ಧಿ ಮತ್ತು ಯಾವುದೋ ಲೋಕದಲ್ಲಿ ಕಳೆದುಹೊದವರಂತೆ ಮಕ್ಕಳು ವರ್ತಿಸುತ್ತಾರೆ. ಅಷ್ಟೇ ಅಲ್ಲ ಕೆಲವು ಅಪಾಯಕಾರಿ ಗೇಮ್‌ಗಳನ್ನು ಆಡುತ್ತಾ ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಿರುವ ಮಕ್ಕಳು ಸಂಖ್ಯೆ ದೊಡ್ಡದಿದೆ ಅದಕ್ಕೆ ಉತ್ತಮ ಉದಾಹರಣೆ ಎಂದರೆ ಬ್ಲೂವೇಲ್ ಗೆಮ್ ಅದೆಷ್ಟೋ ಮಕ್ಕಳು ಈ ಗೇಮ್‌ನಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಅಷ್ಟೇ ಅಲ್ಲ ಕೆಲವು ದುಷ್ಕ್ರತ್ಯಗಳಲ್ಲಿ ಮಕ್ಕಳು ಪಾಲ್ಗೊಂಡಿದ್ದು ಅದಕ್ಕೆ ಮೊಬೈಲ್ ಸ್ಫೂರ್ತಿಯಾಗಿರುವ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ.
 
* ಸೆಲ್ಫಿ ಗುಂಗಿನಲ್ಲಿ ಕಳೆದು ಹೋಗುತ್ತಿದೆ ಯುವಜನತೆ:
ಹಿಂದೆಲ್ಲಾ ಒಂದೇ ಫ್ರೇಮ್‌ನಲ್ಲಿ ನಿಂತು ಲಕ್ಷಣವಾಗಿ ಬಟ್ಟೆ ತೊಟ್ಟು ಫೋಟೋ ಕ್ಲಿಕ್‌ ಮಾಡ್ತಿನಿ ಎನ್ನುವ ಕಾಲ ಒಂದಿತ್ತು ಆದರೆ ಇಂದು ಮೊಬೈಲ್ ಎಂಬ ಮಾಯೆಯಲ್ಲಿ ಎಲ್ಲವೂ ತಕ್ಷಣದಲ್ಲಿಯೇ ಕ್ಲಿಕ್ ಮಾಡಬಹುದು ಹಾಗಾಗೀಯೇ ಎಲ್ಲೆಂದರಲ್ಲಿ ಫೋಟೋ ತೆಗೆಯುವುದು ಯಾವುದೇ ಪ್ರದೇಶದಲ್ಲಿರಲಿ ಬೇಕೆಂದಾಗಲೆಲ್ಲಾ ಬೆರಳನ್ನು ಅಗಲಿಸಿ ವಾರೆ ಮುಖ ಮಾಡಿಕೊಂಡು ಫೋಟೋ ಕ್ಲಿಕ್‌ ಮಾಡಿ ಪ್ರದರ್ಶಿಸುವುದು ಕೂಡಾ ಮಾನಸಿಕ ಕಾಯಿಲೆ ಎಂದು ಹೇಳಲಾಗುತ್ತದೆ ಅದನ್ನು ವೈದ್ಯಕೀಯ ಭಾಷೆಯಲ್ಲಿ ಸೆಲ್ಫೀಟಿಸ್ ಎಂದು ಕರೆಯಲಾಗುತ್ತದೆ ಈ ಗೀಳಿನಲ್ಲಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿರುವ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ.
 
"ತಲೆ ತಗ್ಗಿಸಿ ನನ್ನ ನೋಡು, ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ" ಎಂದು ಪುಸ್ತಕ ಹೇಳಿದರೆ, "ತಲೆ ತಗ್ಗಿಸಿ ನನ್ನ ನೋಡು, ಮತ್ತೆ ತಲೆ ಎತ್ತದಂತೆ ಮಾಡುತ್ತೇನೆ" ಎಂದು ಮೊಬೈಲ್ ಹೇಳಿತಂತೆ. ಈ ಎಲ್ಲಾ ಮಾತುಗಳು ನಮಗೆ ನಗುತರಿಸುತ್ತದೆ ಎನ್ನುವುದು ಎಷ್ಟು ಸತ್ಯವೋ ಇದೇ ನಿಜವಾದ ವಾಸ್ತವ ಸತ್ಯ ಎನ್ನುವುದು ಒಪ್ಪಬೇಕಾದ ವಿಷಯ. ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತವು ದಿನದಿಂದ ದಿನಕ್ಕೆ ತಂತ್ರಜ್ಞಾನದಲ್ಲಿ, ಕೈಗಾರಿಕೆಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹೀಗೆ ಹಲವಾರು ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಆದರೆ ಅದರ ಉಪಯೋಗ ಮೀತಿಯಲ್ಲಿದ್ದರೆ ಉತ್ತಮ. ಅದೇನೆ ಇರಲಿ ಮೊಬೈಲ್ ಕಾರ್ಯಚತುರತೆಗೆ ಸರಿಸಾಟಿ ಮಾತ್ರ ಯಾರು ಇಲ್ಲ ಎಂಬುದು ಎಲ್ಲರೂ ಮೆಚ್ಚಲೇಬೇಕಾದ ವಿಷಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments