ನವದೆಹಲಿ: ಆಫ್ಘಾನಿಸ್ಥಾನ ವಶಕ್ಕೆ ಪಡೆದುಕೊಂಡ ತಾಲಿಬಾನ್ ಉಗ್ರರು ಭಾರತದೊಂದಿಗಿನ ಎಲ್ಲಾ ಆಮದು, ರಫ್ತು ವ್ಯವಹಾರಕ್ಕೆ ನಿರ್ಬಂಧ ಹೇರಿದ್ದಾರೆ. ಪಾಕಿಸ್ತಾನದ ಮಾರ್ಗವಾಗಿ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ನಡೆಯುತ್ತಿದ್ದ ಎಲ್ಲಾ ಸರಕು ಸಾಗಾಣಿಕೆಗೆ ತಾಲಿಬಾನ್ ನಿರ್ಬಂಧ ಹೇರಿರುವುದಾಗಿ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ಪೋರ್ಟ್ ಆರ್ಗನೈಸೇಶನ್ (ಎಫ್ಐಇಒ) ಮಹಾನಿರ್ದೇಶಕ ಡಾ ಅಜಯ್ ಸಹಾಯ್ ತಿಳಿಸಿದ್ದಾರೆ.
ಎರಡು ದಶಕಗಳ ನಂತರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್ ಗಳು ಭಾರತದೊಂದಿಗಿನ ಎಲ್ಲಾ ಆಮದು ಮತ್ತು ರಫ್ತುಗಳನ್ನು ನಿಲ್ಲಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನ ಮಾರ್ಗವಾಗಿ ಆಮದು-ರಫ್ತು ನಡೆಯುತ್ತದೆ. ಭಾರತದ ಅತಿ ದೊಡ್ಡ ಪಾಲುದಾರ ದೇಶವಾಗಿದ್ದು, ಭಾರಿ ಪ್ರಮಾಣದ ಹೂಡಿಕೆಯನ್ನು ಹೊಂದಿದೆ. 400ಕ್ಕೂ ಅಧಿಕ ಪ್ರಾಜೆಕ್ಟ್ ಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
2021 ರ ವೇಳೆಗೆ ಆಫ್ಘಾನಿಸ್ತಾನಕ್ಕೆ 835 ಮಿಲಿಯನ್ ಡಾಲರ್ ನಷ್ಟು ಸರಕು ರಫ್ತು ಮತ್ತು 510 ಮಿಲಿಯನ್ ಡಾಲರ್ ಸರಕು ಆಮದು ಮಾಡಿಕೊಳ್ಳಲಾಗುತ್ತಿದೆ. ಹೂಡಿಕೆ ಮಾಡಿರುವ ಕೆಲವು ಪ್ರಾಜೆಕ್ಟ್ ಪ್ರಗತಿಯಲ್ಲಿವೆ. ಪ್ರಸ್ತುತ, ಭಾರತವು ಸಕ್ಕರೆ, ಔಷಧಿಗಳು, ಉಡುಪು, ಚಹಾ, ಕಾಫಿ, ಮಸಾಲೆಗಳು ಮತ್ತು ಪ್ರಸರಣ ಗೋಪುರಗಳನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುತ್ತದೆ. ಹೆಚ್ಚಾಗಿ ಒಣ ಹಣ್ಣುಗಳು, ಈರುಳ್ಳಿ ಮೊದಲಾದವುಗಳನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.