ರೂ.251ಕೆ ಸ್ಮಾರ್ಟ್‌ಫೋನ್ ಮಾರಾಟ ಮಾಡುವುದಾಗಿ ಹೇಳಿ ಸಂಚಲನ ಸೃಷ್ಟಿಸಿದ್ದ ರಿಂಗಿಂಗ್ ಬೆಲ್ಸ್ ಕಂಪೆನಿ ನಿರ್ದೇಶಕ ಮೋಹಿತ್ ಗೋಯಲ್ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು ಘಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಗೋಯಲ್ ತಮಗೆ ರೂ.16 ಲಕ್ಷದವರೆಗೂ ಮೋಸ ಮಾಡಿದ್ದಾರೆಂದು ಅಯಾಮ್ ಎಂಟರ್‌ಪ್ರೈಸಸ್ ಮಾಲೀಕ ಕೊಟ್ಟ ದೂರಿನ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ರಿಂಗಿಂಗ್ ಬೆಲ್ಸ್ ಕಂಪೆನಿಗೆ ರೂ.30 ಲಕ್ಷದವರೆಗೂ ಪಾವತಿಸಿದ್ದೆವು. ಆದರೆ ರೂ.13 ಲಕ್ಷದವರೆಗೂ ಉತ್ಪನ್ನಗಳನ್ನು ಮಾತ್ರ ಸರಬರಾಜು ಮಾಡಿದ್ದಾರೆ ಎಂದು ದೂರಿದ್ದರು.
ರಿಂಗಿಂಗ್ ಬೆಲ್ಸ್ ಕಂಪನಿ ಕೇವಲ 251 ರು.ಗೆ ಸ್ಮಾರ್ಟ್ ಫೋನ್ ಮಾರಾಟ ಮಾಡುವುದಾಗಿ ಹೇಳಿ ವಿಶ್ವಾದ್ಯಂತ ಭಾರಿ ಪ್ರಚಾರ ಪಡೆದುಕೊಂಡಿತ್ತು. ಆದರೆ ಈ ಘೋಷಣೆಯಾಗಿ ಒಂದು ವರ್ಷವೇ ಕಳೆದರೂ ಅಗ್ಗದ ಸ್ಮಾರ್ಟ್ ಫೋನ್ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಗ್ಗದ ದರದ ಫೋನ್ ಮಾರಾಟ ಪ್ರಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ದೇಶಾದ್ಯಂತ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಈ ಫೋನ್ ಗಾಗಿ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದರು. ಆದರೆ ಬಳಿಕದ ದಿನಗಳಲ್ಲಿ ಸಂಸ್ಥೆ ಗ್ರಾಹಕರಿಗೆ ಫೋನ್ ಮಾರಾಟ ಮಾಡಿದ ಕುರಿತು ಯಾವುದೇ ಸುದ್ದಿ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.