ದೇಶದ ಇಂಧನ ಮಾರುಕಟ್ಟೆಯಲ್ಲಿ ಶೇ.90 ರಷ್ಟು ಚಿಲ್ಲರೆ ವಹಿವಾಟಿನ ಮೇಲೆ ನಿಯಂತ್ರಣ ಹೊಂದಿರುವ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು, ಪ್ರತಿದಿನ ಇಂಧನ ದರದಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿಯೇ ಸರಕಾರಿ ಸ್ವಾಮ್ಯದ ಬೃಹತ್ ತೈಲ ಕಂಪೆನಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮತ್ತು ಅದರ ಸಹೋದರ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗಳು, ಪ್ರತಿದಿನ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲು ಚಿಂತನೆ ನಡೆಸಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ವರದಿಯ ಬಗ್ಗೆ ಪ್ರತಿಕ್ರಿಯಿಸಲು ಸರಕಾರಿ ಸ್ವಾಮ್ಯದ ಕಂಪೆನಿಗಳು ನಿರಾಕರಿಸಿವೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನವರೆಗೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾದಲ್ಲಿ ಅದನ್ನು ಸರಿದೂಗಿಸಲು ಸುಮಾರು 15 ದಿನಗಳ ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿತ್ತು. ಇದೀಗ ಅದರ ಬದಲಿಗೆ ಪ್ರತಿದಿನ ಕಚ್ಚಾ ತೈಲ ದರ ಆಧರಿಸಿ ಇಂಧನ ದರಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.