ರಾಜ್ಯದಲ್ಲಿ ಹಿಂದೆಂದು ಕಂಡರಿಯದ ಭೀಕರ ಬರ ಪರಿಸ್ಥಿತಿ ಇದ್ದು, ಬಡವರಿಗೆ ಉಚಿತ ಆಹಾರಧಾನ್ಯ ವಿತರಣೆ ಮಾಡುವಂತಹ ಅನ್ನಭಾಗ್ಯ ಯೋಜನೆ ಬರದ ತೀವ್ರತೆ ತಡೆಯುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರೆಡ್ಡಿ ಅವರು ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ ಗೋಶಾಲೆಯನ್ನು ಹಸುವಿಗೆ ಮೇವು ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಈ ವರ್ಷ ತೀವ್ರ ಪ್ರಮಾಣದ ಬರ ಪರಿಸ್ಥಿತಿ ಇದೆ.
ಮುಂಗಾರು ಮತ್ತು ಹಿಂಗಾರು ಮಳೆಯ ವೈಫಲ್ಯದಿಂದಾಗಿ ಆಹಾರ ಧಾನ್ಯ ಉತ್ಪಾದನೆ ತೀವ್ರ ಕುಸಿದಿದೆ. ಬಡವರು, ರೈತರು ತಮ್ಮ ಜೀವನ ಸಾಗಿಸುವುದು ದುಸ್ಥರವಾಗಿರುವ ಸಂದರ್ಭದಲ್ಲಿ, ಬಿಪಿಎಲ್ ಕುಟುಂಬದವರಿಗೆ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡಿತರ ಆಹಾರ ಧಾನ್ಯ ನೀಡುತ್ತಿರುವುದು, ಬರದ ತೀವ್ರತೆಯನ್ನು ಸ್ವಲ್ಪವಾದರೂ ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿದೆ. ಈ ವರ್ಷದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.