ಕೆಲ ತಿಂಗಳುಗಳ ಹಿಂದೆ ಉಚಿತ 4ಜಿ ಕೊಡುಗೆಯೊಂದಿಗೆ ರಿಲಯನ್ಸ್ ಜಿಯೋವನ್ನು ಪರಿಚಯಿಸುವ ಮೂಲಕ ರಿಲಯನ್ಸ್ ಕಮ್ಯುನಿಕೇಷನ್ ಭಾರತೀಯ ದೂರಸಂಪರ್ಕ ವಲಯದಲ್ಲಿ ಹೊಸ ಅಲೆಯನ್ನೆಬ್ಬಿಸಿದ್ದು ಸುಳ್ಳಲ್ಲ. 3 ತಿಂಗಳ ವೆಲ ಕಮ್ ಆಫರ್ ಬಳಿಕ ಕಂಪನಿ ಡೈಲಿ ಡಾಟ್ ಬಳಕೆಯನ್ನು 4ಜಿಬಿಯಿಂದ 1 ಜಿಬಿಗೆ ಇಳಿಸಿತ್ತು ಮತ್ತು ಈ ಕೊಡುಗೆಯನ್ನು ಮಾರ್ಚ್ 31ರವರೆಗೆ ಮುಂದುವರೆಸುವುದಾಗಿ ಹೇಳಿದೆ.
ಆದರೆ ತಮ್ಮ ನೆಚ್ಚಿನ ಸಿನಿಮಾ, ವಿಡಿಯೋಗಳನ್ನು ವೀಕ್ಷಿಸ ಬಯಸುವ ಸಿನಿಮಾ ಪ್ರಿಯ ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಜಿಯೋ ಹೊಸ ಕೊಡುಗೆಯನ್ನು ಹೊತ್ತುಕೊಂಡು ಬಂದಿದೆ.
ಈ ಹಿಂದೆ ಸಿನಿಮಾ ವೀಕ್ಷಣೆಗಾಗಿ ಜಿಯೋ ಸಿನಿಮಾ ಎಂಬ ಆಪ್‌ಅನ್ನು ಪರಿಚಯಿಸಿ ಬಾಲಿವುಡ್, ಹಾಲಿವುಡ್ ಸಿನಿಮಾಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿತ್ತು.ಈಗ ಸಿನಿಮಾಗಳನ್ನು ನೋಡುವುದಷ್ಟೆ ಅಲ್ಲದೇ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಸಹ ಕಲ್ಪಿಸಿದೆ. ಅದು ಕೂಡ ಉಚಿತವಾಗಿ.
ಇದಕ್ಕಾಗಿ ಬಳಕೆದಾರರು ಜಿಯೋ ಸಿನಿಮಾ ಆಪ್ ಅನ್ನು ಆಪ್‌ಡೇಟ್ ಮಾಡಬೇಕಿದ್ದು, ಹೊಸ ಆಪ್‌ಡೇಟ್‌ನಲ್ಲಿ 'ಸ್ಮಾರ್ಟ್ ಡೌನ್‌ಲೋಡ್' ಆಯ್ಕೆಯನ್ನು ನೀಡಲಾಗಿದೆ. ಇದರ ಮೂಲಕ ಡೌನ್‌ಲೋಡ್ ಅನ್ನು ನಸುಕಿನ ಜಾವ 2ಗಂಟೆಯಿಂದ 5ಗಂಟೆಯವರೆಗೆ ಶೆಡ್ಯೂಲ್ ಮಾಡಬಹುದಾಗಿದೆ. ಈ ಮೂರು ತಾಸುಗಳಲ್ಲಿ ಡಾಟಾ ಬಳಕೆಗೆ ಯಾವುದೇ ಮಿತಿ ಇರುವುದಿಲ್ಲ.
ಇದಷ್ಟೇ ಅಲ್ಲದೆ ರಿಲಯನ್ಸ್ ಜಿಯೋ ಮೊದಲ ಬಾರಿಗೆ ’6’ ಸೀರೀಸ್‌ನೊಂದಿಗೆ ಆರಂಭವಾಗುವ ಮೊಬೈಲ್ ನಂಬರ್‌ಗಳನ್ನು ಗ್ರಾಹಕರಿಗೆ ನೀಡಲಿದೆ. ಈ ಹಿನ್ನೆಲೆಯಲ್ಲಿ ದೂರಸಂಪರ್ಕ ಇಲಾಖೆ (ಡಾಟ್)ಯಿಂದ ಅನುಮತಿ ಪಡೆದಿದೆ ಎಂಬ ಸುದ್ದಿ ಇದೆ.