ಸರ್ಕಾರದ ಸೌಲಭ್ಯಗಳನ್ನು ಪಡೆದು ರಾಜ್ಯದಲ್ಲಿ ಕೈಗಾರಿಕೆಗಳನ್ನು ನಡೆಸುತ್ತಿರುವ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ನೌಕರಿಯಲ್ಲಿ ಶೇ. 70 ರಷ್ಟು ಉದ್ಯೋಗ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದರು.
ಉದ್ದಿಮೆದಾರರು ಉದ್ಯೋಗ ನೀಡದಿದ್ದರೆ ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದನ್ನು ಕಾನೂನು ಇಲಾಖೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಕಾನೂನು ಇಲಾಖೆ ಜೊತೆ ಚರ್ಚೆ ನಡೆಯುತ್ತಿದ್ದು ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಚಿವ ಸಂಪುಟದ ಮುಂದೆ ತಂದು ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ. 50 ರಷ್ಟು ಎ ಮತ್ತು ಬಿ ದರ್ಜೆ ಹುದ್ದೆಗಳಲ್ಲಿ ಶೇ. 20 ರಷ್ಟು ಮೀಸಲಿಡಬೇಕು ಎಂದ ಸಚಿವರು ಒಟ್ಟಾರೆ ಶೇ. 70 ರಷ್ಟು ಹುದ್ದೆಗಳು ಸ್ಥಳೀಯರಿಗೆ ಸಿಗಬೇಕು ಎಂಬುದು ಸರ್ಕಾರದ ಬಯಕೆಯಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು 16,000 ಕೈಗಾರಿಕೆಗಳಿಗೆ ಎಲ್ಲದರಲ್ಲೂ ಕನ್ನಡಿಗರಿಗೆ ಆದ್ಯತೆ ಮೇಲೆ ಉದ್ಯೋಗ ಕಲ್ಪಿಸಬೇಕು ಎಂಬ ಉದ್ದೇಶದಿಂದ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ. ಪ್ರಸ್ತುತ ಎಷ್ಟು ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ತರಿಸಲಾಗುವುದು ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.