ಮುಂಬೈ: ನಿರೀಕ್ಷೆಯಂತೇ ಮುಕೇಶ್ ಅಂಬಾನಿ ತಮ್ಮ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಜಿಯೋ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದಾರೆ. ಅಂಬಾನಿ ಮಕ್ಕಳಾದ ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಜಿಯೋ ಫೋನ್ ಲೋಕಾರ್ಪಣೆ ಮಾಡಿದರು.
ಜಿಯೋ ಸಿಮ್ ಮೂಲಕ ಉಚಿತವಾಗಿ ಇಂಟರ್ನೆಟ್ ಒದಗಿಸಿದ್ದ ರಿಲಯನ್ಸ್ ಇದೀಗ ಜಿಯೋ ಫೋನ್ ನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ. ಆದರೂ ಫೋನ್ ಖರೀದಿಸುವಾಗ 1500 ರೂ. ಡೆಪಾಸಿಟ್ ಪಾವತಿಸಬೇಕು. ಇದನ್ನು ಮೂರು ವರ್ಷಗಳ ನಂತರ ಸಂಪೂರ್ಣವಾಗಿ ಮರಳಿ ಪಡೆಯಬಹುದು. ಆಗಸ್ಟ್ 24 ರಿಂದ ಪ್ರಿ ಬುಕಿಂಗ್ ಆರಂಭವಾಗಲಿದ್ದು, ಸೆಪ್ಟೆಂಬರ್ ನಿಂದ ಸ್ಮಾರ್ಟ್ ಫೋನ್ ಲಭ್ಯವಾಗುವುದು ಎಂದು ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
ಈ ನೂತನ 4ಜಿ ಫೋನ್ ಗೆ ‘ರಿಲಯನ್ಸ್ ಜಿಯೋ ಫೋನ್’ ಎಂದೇ ಹೆಸರಿಡಲಾಗಿದೆ. ಈ ಫೋನ್ ಗಳಲ್ಲಿ ಉಚಿತ ಕರೆ, ಅನಿಯಮಿತ ಇಂಟರ್ ನೆಟ್ ಮತ್ತು ಎಸ್ ಎಂಎಸ್ ಸೌಲಭ್ಯವಿರಲಿದೆ. ಪ್ರತೀ ತಿಂಗಳು ಕೇವಲ 153 ರೂ. ಪಾವತಿಸಿದರೆ ಈ ಫೋನ್ ನಲ್ಲಿ ಈ ಎಲ್ಲಾ ಸೌಲಭ್ಯಗಳು ಲಭ್ಯವಿರಲಿದೆ. ಅಲ್ಲದೆ ರಿಲಯನ್ಸ್ ಟಿವಿ-ಕ್ಯಾಬಲ್ ಬೇಕಾಗಿದ್ದರೆ ಪ್ರತೀ ತಿಂಗಳು 309 ರೂ. ಪಾವತಿಸಿದರೆ ಸಾಕು. ರಿಲಯನ್ಸ್ ಜಿಯೋ ಫೋನ್ ನಲ್ಲಿ ಧನ್ ಧನಾ ಧನ್ ಗ್ರಾಹಕರೂ ಮಾಸಿಕ 153 ರೂ. ಪಾವತಿಸಿದರೆ ಸಾಕು.
ಪ್ರಧಾನಿ ಮೋದಿಯವರ ಕನಸಿನ ಸರ್ಕಾರಿ ಆಪ್ ಗಳು, ಡಿಜಿಟಲ್ ಹಣ ಪಾವತಿ ಎಲ್ಲವೂ ಸಾಧ್ಯವಾಗುವಂತಹ ಫೀಚರ್ ಗಳು ಈ ಫೋನ್ ನಲ್ಲಿರಲಿವೆ. ಅಂಬಾನಿ ಕುಟುಂಬದ ಕುಡಿಗಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಈ ರಿಲಯನ್ಸ್ ಜಿಯೋ ಫೋನ್ ಯೋಜನೆಯ ನಿರ್ದೇಶಕರಾಗಿರುತ್ತಾರೆ ಎಂದು ಇದೇ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.