ಪೋಷಕರು ಮತ್ತು ಇತರ ಸಂಬಂಧಿಕರಿಂದ ನಕಲಿ ಬಾಡಿಗೆ ರಸೀದಿ ಪಡೆದು ಆದಾಯ ತೆರಿಗೆ ರಿಟರ್ನ್ಸ್ ಉಳಿಸಲು ಪ್ರಯತ್ನಿಸುತ್ತಿದ್ದ ತೆರಿಗೆ ವಂಚಕರಿಗೆ ಆದಾಯ ತೆರಿಗೆ ಇಲಾಖೆ ಇದೀಗ ಕಡಿವಾಣ ಹಾಕಲು ಮುಂದಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಂದರ್ಭದಲ್ಲಿ ತೆರಿಗೆ ಕಟ್ಟುವಾಗ ಮತ್ತು ತೆರಿಗೆ ಹಣವನ್ನು ಮರಳಿ ಪಡೆಯುವ ಸಂದರ್ಭದಲ್ಲಿ ನಕಲಿ ಬಾಡಿಗೆ ರಸೀದಿ ನೀಡಿ ಆದಾಯ ತೆರಿಗೆ ಇಲಾಖೆಯನ್ನು ವಂಚಿಸಲಾಗುತ್ತಿತ್ತು. ಇದರಿಂದ ಆದಾಯ ತೆರಿಗೆ ಪಾವತಿದಾರನಿಗೆ ಸ್ವಲ್ಪ ಲಾಭವಾದರೆ, ಸರಕಾರದ ಬೊಕ್ಕಸಕ್ಕೆ ಹಾನಿಯಾಗುತ್ತಿತ್ತು. ಇದೀಗ ನಕಲಿ ಬಾಡಿಗೆಗೆ ಫುಲ್‌ಸ್ಟಾಪ್ ಹಾಕಲು ಇಲಾಖೆ ನಿರ್ಧರಿಸಿದೆ.
ನಕಲಿ ಬಾಡಿಗೆ ಹೆಸರಲ್ಲಿ ಆದಾಯ ತೆರಿಗೆ ಪಾವತಿಯಲ್ಲಿ ವಂಚಿಸುತ್ತಿರುವುದು ಕಂಡ ಇಲಾಖೆ, ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ ಎನ್ನುವುದಕ್ಕೆ ಹಲವು ದಾಖಲೆಗಳನ್ನು ಇಲಾಖೆಗೆ ನೀಡುವುದು ಕಡ್ಡಾಯಗೊಳಿಸಲಿದೆ. ಹೇಗಾದರೂ ಮಾಡಿ ತೆರಿಗೆ ವಂಚಿಸಬೇಕು ಎನ್ನುವ ನಿಲುವು ಹೊಂದಿದ್ದರೆ ಕೂಡಲೇ ನಿಮ್ಮ ನಿಲುವು ಬದಲಿಸಿ. ಇಲ್ಲವೇ ಜೈಲಿಗೆ ಹೋಗಲು ಸಿದ್ದರಾಗಿ.
ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ನೀಡಿರುವ ತೀರ್ಪಿನಂತೆ, ಬಾಡಿಗೆ ಮನೆಯಲ್ಲಿ ವಾಸವಿರುವ ಆದಾಯ ತೆರಿಗೆ ಪಾವತಿದಾರರು, ಬಾಡಿಗೆದಾರ ಮತ್ತು ಮಾಲೀಕರ ನಡುವಿನ ಕರಾರು ಪತ್ರ. ವಿದ್ಯುತ್ ಬಿಲ್, ನೀರಿನ ಬಿಲ್ ದಾಖಲೆಗಳನ್ನು ಕೂಡಾ ಐಟಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ನಕಲಿ ಬಾಡಿಗೆ ರಸೀದಿ ತೋರಿಸಿ ಶೇ.60 ರಷ್ಟು ತೆರಿಗೆ ಪಾವತಿ ವಂಚಿಸುವವರಿಗೆ ಕಡಿವಾಣ ಬೀಳಲಿದೆ.
ಕೆಲವರು ಸ್ವಂತ ಮನೆಯಲ್ಲಿಯೇ ವಾಸವಾಗಿದ್ದರೂ ನಕಲಿ ಬಾಡಿಗೆ ರಸೀದಿಯ ಮೇಲೆ ಪೋಷಕರ ಸಹಿ ಪಡೆಯುವುದು, ಕೆಲವೊಮ್ಮೆ ಅಸಲಿ ಬಾಡಿಗೆಗಿಂತ ಹೆಚ್ಚಿನ ಹಣ ಬಾಡಿಗೆ ರಸೀದಿಯಲ್ಲಿ ಸೂಚಿಸಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಕಂಡು ಬಂದಿದೆ. ಇಂತಹ ವಂಚನೆ ತಡೆಯಲು ಇದೀಗ ಆದಾಯ ತೆರಿಗೆ ಇಲಾಖೆ ಮುಂದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.