ದಿನ ದಿನಕ್ಕೂ ಆರ್ಥಿಕ ಹಿಂಜರಿತ, ಉದ್ಯೋಗ ಕಡಿತದ ಭಯ ಹೆಚ್ಚಾಗುತ್ತಿರುವ ನಡುವೆಯೇ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಹೊಸದಾಗಿ ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ. ಈ ವಾರದಲ್ಲಿ ಸಾವಿರಾರು ಉದ್ಯೋಗಿಗಳನ್ನು ಸಂಸ್ಥೆ ವಜಾಗೊಳಿಸಲಿದೆ ಎಂದು ಈ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ ಸಂಸ್ಥೆಯು ಈ ಹಿಂದೆ ನವೆಂಬರ್‌ನಲ್ಲಿ ಶೇ. 13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಕಂಪನಿಯು ಹೆಚ್ಚು ದಕ್ಷ ಸಂಸ್ಥೆಯಾಗಲು ಹೊರಟಿದ್ದು, ಮತ್ತೆ ಹೊಸದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಸಂಸ್ಥೆಯು ತನ್ನ ಹಿಂದಿನ ಸುತ್ತಿನ ಕಡಿತದಲ್ಲಿ 11,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿತ್ತು. ಇದು ಸಂಸ್ಥೆಯ ಈವರೆಗಿನ ದೊಡ್ಡ ವಜಾಗೊಳಿಸುವಿಕೆ ಆಗಿತ್ತು. ಕಂಪನಿಯು ತನ್ನ ಸಂಸ್ಥೆಯನ್ನು ಚೊಕ್ಕಗೊಳಿಸಲು ಹೊರಟಿದ್ದು ಅನಿವಾರ್ಯವಲ್ಲ ಎಂದು ಭಾವಿಸುವ ಸಂಪೂರ್ಣ ತಂಡಗಳನ್ನು ವಜಾಗೊಳಿಸುತ್ತಿದೆ ಎಂದು 'ಬ್ಲೂಮ್‌ಬರ್ಗ್ ನ್ಯೂಸ್' ಫೆಬ್ರವರಿಯಲ್ಲಿ ವರದಿ ಮಾಡಿತ್ತು. ಇದನ್ನೀಗ ಅಂತಿಮಗೊಳಿಸಲಾಗುತ್ತಿದ್ದು ಸಾವಿರಾರು ಸಿಬ್ಬಂದಿಗಳ ಮೇಲೆ ಇದರ ಪರಿಣಾಮ ಬೀರಬಹುದು ಎನ್ನಲಾಗಿದೆ