ಬರಗಾಲದ ಈ ಸಂದರ್ಭದಲ್ಲಿ ರೈತಾಪಿ ಕೂಲಿ ಕಾರ್ಮಿಕರಿಗೆ ಹಳ್ಳಿಗಳಲ್ಲಿ ಕೆಲಸವಿಲ್ಲ, ಹಳ್ಳಿಗಳಿಂದ ನಗರಗಳಿಗೆ ಗುಳೆ ಹೋಗುತ್ತಿದ್ದ ಜನರಿಗೆ ನೋಟಿನ ಅಪಮೌಲ್ಯೀಕರಣದಿಂದ ನಗರಗಳಲ್ಲಿ ಸಹ ಕೆಲಸಗಳು ಸದ್ಯಕ್ಕೆ ತಟಸ್ಥಗೊಂಡಿರುವುದರಿಂದ ಕೂಲಿ ಕಾರ್ಮಿಕರಿಗೆ ಜೀವನ ಸಾಗಿಸುವುದು ಅತ್ಯಂತ ಕಷ್ಟಕರವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಉದ್ಯೋಗಗಳನ್ನು ಸೃಷ್ಟಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಅದರ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳದ್ದು ದೇಶ ಸೇವೆ ಇದ್ದಂತೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್. ಕೆ. ಪಾಟೀಲ್ ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಜಂಟಿಯಾಗಿ ಇಂದು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜಲ ಸಂರಕ್ಷಣ ಅಭಿಯಾನದ ಕಾರ್ಯಾಗಾರವನ್ನು ಉದ್ಫಾಟಿಸಿ ಸಚಿವರು ಮಾತನಾಡಿ ಊರಿಗೊಂದು ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಅಲ್ಲಿನ ಬಡಕೂಲಿ ಕಾರ್ಮಿಕರಿಗೆ ಕೆಲಸವನ್ನು ಒದಗಿಸಬೇಕು. ಜನರಿಗೆ ಕೆರೆ ಅವಶ್ಯಕತೆ ಇಲ್ಲದ ಊರುಗಳಲ್ಲಿ ಜಾನುವಾರು ಮತ್ತು ಪ್ರಾಣಿಪಕ್ಷಿಗಳಿಗಾಗಿಯಾದರೂ ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.
ನರೇಗ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಏಳು ದಿನಗಳೊಳಗಾಗಿ ಕೂಲಿಯನ್ನು ಕೊಡಬೇಕು, ಮತ್ತೆ 8 ದಿನಗಳ ಕಾಲಾವಕಾಶವಿದ್ದು ಒಟ್ಟು 15 ದಿನಗಳೊಳಗೆ ಕೂಲಿ ಸಿಗದಿದ್ದಲ್ಲಿ ಅವರಿಗೆ ಪ್ರತಿ ದಿನಕ್ಕೆ ಶೇ 0.05 ಬಡ್ಡಿಯನ್ನು ಕಾನೂನಿನ ಪ್ರಕಾರ ಕೂಲಿ ನೀಡಲು ತಡವಾಗಿದ್ದಕ್ಕೆ ಪರಿಹಾರವಾಗಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಂವಾದ: ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳೊಂದಿಗೆ ಸಚಿವರು ಸಂವಾದವನ್ನು ಸಹ ನಡೆಸಿ ಅವರ ಸಮಸ್ಯೆಗಳನ್ನು ಅಲಿಸಿ ಸೂಕ್ತ ಪರಿಹಾರಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಾಗಾರದಲ್ಲಿ ನಾಲ್ಕು ವಿವಿಧ ವಿಷಯಗಳ ಮೇಲೆ ವಿಚಾರ ಸಂಕಿರಣವನ್ನು ದಿನಪೂರ್ತಿ ನಡೆಸಲಾಯಿತು. ವಿಷಯ ತಜ್ಞರು, ಕೇಂದ್ರ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಹಿರಿಯ ಅಧಿಕಾರಿಗಳು ಹಾಗೂ ಕೃಷಿ, ಅರಣ್ಯ, ಸಣ್ಣ ನೀರಾವರಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.